Tuesday, 5 August 2014

ಚಕ್ರ ಮತ್ತು ಗಾಂಡೀವ.....

           ಪಾಂಡವರ ರಾಜಧಾನಿ ಇಂದ್ರಪ್ರಸ್ಥ. ಖಾಂಡವವನ ಇಲ್ಲಿನ ಒಂದು ತೋಟ. ಇದಕ್ಕೆ ಖಾಂಡವಪ್ರಸ್ಥ ಎಂಬ ಹೆಸರು ಇದೆ. ಖಾಂಡವವನ ದೇವೇಂದ್ರನದು ಆದ್ದರಿಂದ ಇಂದ್ರಪ್ರಸ್ಥ ಎಂಬ ಹೆಸರು ಬಂದಿರಬಹುದು. ಒಮ್ಮೆ ಕೃಷ್ಣಾರ್ಜುನರು ಯಮುನ ನದಿಯ ತೀರದಲ್ಲಿ ವಿಹರಿಸುತ್ತಿದ್ದಾಗ ಅಗ್ನಿದೇವನು ಬ್ರಾಹ್ಮಣ ವೇಷದಲ್ಲಿ ಬಂದು ಶ್ವೇತಕಿ ಎಂಬ ರಾಜನು ಮಾಡಿದ ಯಜ್ಞದ ಹವಿಸ್ಸನ್ನು ತಿಂದು ತಿಂದು ಅಜೀರ್ಣವಾಗಿದ್ದರಿಂದ ದಿವ್ಯ ಔಷಧಗಳ ನಿಲಯವಾದ ಖಾಂಡವವನವನ್ನು ಸುಟ್ಟು ತಿಂದರೆ ಅಜೀರ್ಣ ವಾಸಿಯಾಗುವುದೆಂದು ಬ್ರಹ್ಮವೈದ್ಯನು ಸಲಹೆ ನೀಡಿರುವುದಾಗಿ ತಿಳಿಸಿ ಈಗಾಗಲೇ ಏಳು ಬಾರಿ ಪ್ರಯತ್ನಿಸಿದರೂ ದೇವೇಂದ್ರನು ಅವನ ಪ್ರಯತ್ನಗಳನ್ನೆಲ್ಲಾ ಭಂಗಗೊಳಿಸಿದ ಕಾರಣ ಅವರಿಂದ ಸಹಾಯ ಯಾಚಿಸಿದನು. ಇದಕ್ಕೆ ಕೃಷ್ಣಾರ್ಜುನರು ಒಪ್ಪಿದರು. ಅದಕ್ಕಾಗಿ ಅಗ್ನಿದೇವನು ಅವರಿಬ್ಬರಿಗೆ ಯುದ್ಧ ಸಾಮಾಗ್ರಿಗಳನ್ನು ದಾನ ನೀಡಿ, ಕೃಷ್ಣನಿಗೆ ಚಕ್ರವನ್ನು ಮತ್ತು ಅರ್ಜುನನಿಗೆ ಗಾಂಡೀವ ಬಿಲ್ಲನ್ನು ವರವಾಗಿ ಕರುಣಿಸಿದ. ಅಗ್ನಿ ಒಂದು ಕಡೆಯಿಂದ ಸುಟ್ಟುಕೊಂಡು ಬರುವುದು, ಕೃಷ್ಣಾರ್ಜುನರು ಸುತ್ತಾಲೂ ಓಡಾಡುತ್ತಾ ಮೃಗಪಕ್ಷಿ ಯಾವುದೂ ತಪ್ಪಿಸಿಕೊಂಡು ಹೋಗದಂತೆ ಕಾವಲಿರುವುದು ಅವರ ಸ್ಥೂಲ ಒಪ್ಪಂದವಾಗಿತ್ತು. ಅಗ್ನಿಯು ಸುಡಲು ಪ್ರಾರಂಭಿಸುತ್ತಿದ್ದಂತೆ ಇಂದ್ರನು ಯುದ್ಧಕ್ಕೆ ಬಂದನು. ವರುಣನನ್ನು ಕರೆಯಿಸಿ ಮಳೆ ಸುರಿಸುವಂತೆ ಆಜ್ಞಾಪಿಸಿದನು. ಆದರೆ ಕೃಷ್ಣಾರ್ಜುನರು ಆಕಾಶಕ್ಕೆ ದೊಡ್ಡದೊಂದು  ತಡಿಕೆಯನ್ನು ನಿರ್ಮಿಸಿ ತೋಟ ನೆನೆಯದಂತೆ ನೋಡಿಕೊಂಡರು. ಹೀಗೆ ಇವರಿಬ್ಬರೂ ಒಂದು ವರ್ಷದವರೆಗೆ ಜಲವರ್ಷ, ಶಿಲಾವರ್ಷಗಳನ್ನು ತಮ್ಮ ಅಸ್ತ್ರಗಳಿಂದ ತಡೆದರು. ಕೃಷ್ಣಾರ್ಜುನರು ಮಣಿಯದಿದ್ದುದನ್ನು ಕಂಡು ಇಂದ್ರನು ಅವರಿಬ್ಬರೊಂದಿಗೆ ಸಂಧಾನ ಮಾಡಿಕೊಂಡನು.

ಗ್ರಂಥ ಋಣ: ಮಹಾಭಾರತದ ಪಾತ್ರ ಸಂಗತಿಗಳು, ಅ.ರಾ. ಮಿತ್ರ