ಒಮ್ಮೆ ತಪೋ ಧನರಾದ ಮಹರ್ಷಿಗಳೆಲ್ಲಾ ಒಂದೆಡೆ ಸೇರಿದಾಗ 'ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು' ಎಂಬ ವಿಷಯದ ಬಗ್ಗೆ ವಾಗ್ವಾದ ನಡೆಯಿತು. ಆಗ ಇದನ್ನು ತೀರ್ಮಾನಿಸುವ ಹೊಣೆಯನ್ನು ಭೃಗು ಮಹರ್ಷಿಗೆ ವಹಿಸಲಾಯಿತು. ಶೀಘ್ರಕೋಪಿಯಾದ ಭೃಗುವು ತನಗೆ ಕೊಟ್ಟಿದ್ದ ಕರ್ತವ್ಯವನ್ನು ಪಾಲಿಸಲು ಮೊದಲು ಸತ್ಯಲೋಕಕ್ಕೆ ಹೋಗಿ ಬ್ರಹ್ಮದೇವನ ಮುಂದೆ ನಿಂತನು. ಆ ಸಮಯದಲ್ಲಿ ವಾಗ್ದೇವಿಯು ಮೆಲು ಸ್ವರದಲ್ಲಿ ಮಧುರವಾಗಿ ವೀಣಾವಾದನ ಮಾಡುತ್ತಿದ್ದು ಬ್ರಹ್ಮದೇವನು ಆ ಗುಂಗಿನಲ್ಲೇ ಪರವಶನಾಗಿದ್ದನು. ಭೃಗುವು ಬಹಳ ಹೊತ್ತು ಕಾದರೂ ಬ್ರಹ್ಮನು ಮಹರ್ಷಿಯ ಕ್ಷೇಮ ಸಮಾಚಾರಗಳನ್ನು ವಿಚಾರಿಸಲಿಲ್ಲ. ಇದರಿಂದ ಕುಪಿತನಾದ ಭೃಗುವು 'ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ' ಎಂದು ಶಪಿಸಿದನು.
ಅಲ್ಲಿಂದ ನೇರವಾಗಿ ಕೈಲಾಸಕ್ಕೆ ಹೋಗಿ ಶಿವ ಪಾರ್ವತಿಯರ ಮುಂದೆ ನಿಂತನು. ಆ ಸಮಯದಲ್ಲಿ ಶಿವ ಪಾರ್ವತಿಯರು ನೃತ್ಯದಲ್ಲಿ ತಲ್ಲೀನರಾಗಿದ್ದು ಅವರೂ ಸಹ ಭೃಗು ಮಹರ್ಷಿಯನ್ನು ವಿಚಾರಿಸಲಿಲ್ಲ. ಇದರಿಂದ ಮತ್ತಷ್ಟು ಕುಪಿತನಾದ ಭೃಗುವು 'ನಿನ್ನ ಲಿಂಗಾಕಾರಕ್ಕೆ ಮಾತ್ರ ಭೂಲೋಕದಲ್ಲಿ ಪೂಜೆಯಾಗಲಿ' ಎಂದು ಶಪಿಸಿದನು.
No comments:
Post a Comment