ಕಶ್ಯಪನ ಪತ್ನಿಯರಾದ ಕದ್ರು ಮತ್ತು ವಿನುತೆಯರು ಅಕ್ಕ ತಂಗಿಯರು. ಸಮುದ್ರ ಮಂಥನದ ಕಾಲದಲ್ಲಿ ಹುಟ್ಟಿದ ‘ಉಚ್ಚೈಶ್ರವಸ್’ ಎಂಬ ಕುದುರೆಯನ್ನು ನೋಡಲು ಹೊರಟ ಇವರು ಕುದುರೆಯ ಬಾಲ ಕಪ್ಪಾಗಿದೆ ಎಂದು ಕದ್ರು, ಇಲ್ಲವೆಂದು ವಿನುತೆ ವಾಗ್ವಾದ ನಡೆಸುತ್ತಿದ್ದರು. ಆಗ ಸೋತವರು ಗೆದ್ದವರ ದಾಸಿಯಾಗಬೇಕೆಂದು ಪಂಥ ತೊಟ್ಟರು. ಪಂಥದಲ್ಲಿ ಗೆಲ್ಲಲು ಕದ್ರುವು ಈಗಾಗಲೇ ಕಶ್ಯಪನಿಂದ ವರವಾಗಿ ಪಡೆದ ಸಾವಿರಾರು ಸರ್ಪಪುತ್ರರನ್ನು ಕರೆದು ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಆಜ್ಞಾಪಿಸಿದಳು. ಆದರೆ ಸರ್ಪಕುಲದಲ್ಲಿ ವಿವೇಕಶಾಲಿಯಾದ ವಾಸುಕಿ ಈ ಮಾತನ್ನು ಧಿಕ್ಕರಿಸಿದ. ಉಳಿದವರು ಅವನಂತಯೇ ನಡೆದರು. ಇದಕ್ಕೆ ಕುಪಿತಳಾದ ಕದ್ರುವು ತನ್ನ ಮಾತನ್ನು ಕೇಳದ ಮಕ್ಕಳು ಏಕೆ ಬದುಕಿರಬೇಕೆಂದು, “ನೀವೆಲ್ಲಾ ಜನಮೇಜಯರಾಯನು ನಡೆಸುವ ಯಜ್ಞದಲ್ಲಿ ಯಜ್ಞಕುಂಡದಲ್ಲಿ ಬಿದ್ದು ಸಾಯಿರಿ” ಎಂದು ಶಾಪವಿತ್ತಳು. ಆದರೆ ಸಾವಿರ ಮಕ್ಕಳ ಪೈಕಿ ‘ಕರ್ಕೋಟಕ’ನೆಂಬ ಸರ್ಪ ಮಾತ್ರ ಶಾಪಕ್ಕೆ ಹೆದರಿ ಯಾರಿಗೂ ಕಾಣದೆ ಕುದುರೆಯ ಬಾಲಕ್ಕೆ ನೇತುಬಿದ್ದ. ಇದರಿಂದ ಕುದುರೆಯ ಬಾಲ ಕಪ್ಪಾಗಿ ಕಂಡಿತು. ಹೀಗಾಗಿ ವಿನುತೆಯು ಕದ್ರುವಿನ ದಾಸಿಯಾಗ ಬೇಕಾಯಿತು. ಇದನ್ನು ತಿಳಿದ ವಿನುತೆಯ ಮಗ ಗರುಡ ತಾಯಿಯನ್ನು ದಾಸ್ಯದಿಂದ ಬಿಡಿಸಲು ಏನು ಮಾಡಬೇಕೆಂದು ಕೇಳಿದಾಗ ದೇವಲೋಕದಿಂದ ಅಮೃತವನ್ನು ತಂದುಕೊಡಬೇಕೆಂದು ನಾಗಗಳು ಷರತ್ತು ಹಾಕಿದವು. ಇದನ್ನು ಒಪ್ಪಿಕೊಂಡ ಗರುಡನು ಆಕಾಶಕ್ಕೆ ಹಾರಿ ದೇವತೆಗಳನ್ನು ಸೋಲಿಸಿ ಅಮೃತ ಕುಂಭವನ್ನು ಹೊತ್ತುಕೊಂಡು ಹೊರಟನು. ಮಾರ್ಗ ಮಧ್ಯದಲ್ಲಿಈತನ ಪರಾಕ್ರಮಕ್ಕೆ ಮೆಚ್ಚಿ ಮಹಾವಿಷ್ಣುವಿನ ಕೋರಿಕೆಯಂತೆ ಆತನ ವಾಹನವಾಗಲು ಒಪ್ಪಿಕೊಂಡನು. ಮುಂದೆ ಇಂದ್ರನೊಡನೆ ಯುದ್ಧ ಮಾಡುವಾಗ ಆತನ ವಜ್ರಾಯುದದ ಹೊಡೆತದಿಂದ ಗರುಡನ ಒಂದು ಗರಿ ಭೂಮಿಗೆ ಬಿದ್ದುದ್ದರಿಂದ ಗರುಡನಿಗೆ ಸುಪರ್ಣ ಎಂದು ಹೆಸರಾಯಿತು. ಇಂದ್ರನು ಗರುಡನ ಮನೋಭಿಪ್ರಾಯವನ್ನು ಮೆಚ್ಚಿ ‘ಸರ್ಪಭಕ್ಷಕನಾಗು’ ಎಂದು ವರ ಕೊಟ್ಟನು.
ನಂತರ ಅಮೃತಕಲಶವನ್ನು ನಾಗಗಳಿಗೆ ಕೊಟ್ಟು ತನ್ನ ತಾಯಿಯನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದನು. ಆದರೆ ಸರ್ಪಗಳು ಸ್ನಾನ ಮಾಡಿಕೊಂಡು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ಆ ಕೊಡವನ್ನು ಅಪಹರಿಸಿದ್ದನು. ಸರ್ಪಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದೆಂದು ಆ ದರ್ಭೆಯನ್ನು ನೆಕ್ಕಿದ್ದರಿಂದ ಅವುಗಳಿಗೆ ‘ಸೀಳುನಾಲಿಗೆ’ ಬಂದಿತೆಂದು ಉಲ್ಲೇಖಗಳಿವೆ.