Wednesday, 25 June 2014

ಮಣಿಮಂತನಿಗೆ ಅಗಸ್ತ್ಯರ ಶಾಪ...

             ಒಮ್ಮೆ ಕುಶಾವತಿ ಎಂಬ ಪುಣ್ಯನದಿಯ ತೀರದಲ್ಲಿ ದೇವತೆಗಳು ಸತ್ರಯಾಗ ಮಾಡುತ್ತಿದ್ದಾಗ ಅಲ್ಲಿಗೆ ಕುಬೇರನು ತನ್ನ ಗೆಳೆಯ ಮಣಿಮಂತನನ್ನು ಕರೆದುಕೊಂಡು ಪುಷ್ಪಕವಿಮಾನದಲ್ಲಿ ಬರುತ್ತಿದ್ದ. ಆಗ ಕಾಳಿ ನದಿಯ ದಡದಲ್ಲಿ ಅಗಸ್ತ್ಯರು ಸೂರ್ಯನಮಸ್ಕಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮಣಿಮಂತ ಕೆಳಗೆ ಉಗುಳಿದ. ಅದು ನೇರವಾಗಿ ಅಗಸ್ತ್ಯರ ಮೇಲೆ ಬಿದ್ದಿತು. ಆಗ ಅಗಸ್ತ್ಯರಿಗೆ ಸಿಟ್ಟು ಬಂದು ಮಣಿಮಂತನಿಗೆ "ನಿನಗೆ ಮಾನವನಿಂದಲೇ ಸಾವು ಬರಲಿ" ಎಂದು ಶಾಪವಿತ್ತರು. 

             ಇದಾದ ಸ್ವಲ್ಪ ಸಮಯದ ನಂತರ ಪಾಂಡವರು ಅರಣ್ಯವಾಸದಲ್ಲಿದ್ದಾಗ ಕೆಲವು ದಿನಗಳ ಕಾಲ ಗಂಧಮಾದನ ಪ್ರದೇಶದಲ್ಲಿ ಪಾರ್ಷ್ಣಿಸೇನ ಮುನಿಯ ಆಶ್ರಮದಲ್ಲಿ ಸ್ವಲ್ಪ ಕಾಲ ತಂಗಿದ್ದರು. ಅಲ್ಲಿದ್ದಾಗ ಒಂದು ವಿಚಿತ್ರ ಘಟನೆ ನಡೆಯಿತು. ಗರುಡನು ಒಂದು ಸಪ೵ವನ್ನು ಕಚ್ಚಿಕೊಂಡು ಹಾರಿದಾಗ ರೆಕ್ಕೆಯ ರಭಸಕ್ಕೆ ಒಂದು ಮರ ಅಲುಗಾಡಿ ಅದರ ಹೂವು ಉದುರಿತು. ಅದು ಪಂಚವರ್ಣ ಸೌರಭದ ಕುಸುಮ. ಶ್ವೇತ ನದಿಯ ತೀರಪ್ರದೇಶದಲ್ಲಿ ದ್ರೌಪದಿಯ ವಸತಿಯ ಮುಂದೆ ಆ ಹೂವು ಬಿದ್ದಿತು. ಅದರ ಕಂಪಿಗೆ ಮಾರುಹೋದ ಆಕೆ ತನ್ನ ಆಸೆಯನ್ನು ಭೀಮನಲ್ಲಿ ಹೇಳಿಕೊಳ್ಳುತ್ತಾಳೆ. ಆಗ ಭೀಮನು ಆ ಹೂವನ್ನು ತರುವೆನೆಂದು ಅದನ್ನು ಹುಡುಕಿಕೊಂಡು ಹೊರಟನು. ಕೊನೆಗೆ ಅದು ಕುಬೇರನ ತೋಟದಲ್ಲಿ ಸಿಕ್ಕಿತು. ಶಂಖವನ್ನು ಊದಿಕೊಂಡು ಹೋಗುತ್ತಿದ್ದ ಭೀಮನ ಎದುರಿಗೆ ದೈತ್ಯ ಮಣಿಮಂತನು ಅಡ್ಡ ಬಂದು ಹೂವನ್ನು ಕೀಳದಂತೆ ಅಡ್ಡಿಪಡಿಸಿದ. ಅದನ್ನು ಕೇಳದ ಭೀಮನು ಅವನ ಮೇಲೆ ಹೋರಾಟಕ್ಕೆ ನಿಲ್ಲುತ್ತಾನೆ. ಇಬ್ಬರ ನಡುವೆ ಭೀಕರ ಕಾಳಗ ನಡೆದು ಭೀಮನ ಗದಾಘಾತದಿಂದ ಮಣಿಮಂತ ಸತ್ತ. ಮಣಿಮಂತನ ಸೋಲು ಮತ್ತು ಸಾವಿನ ಸುದ್ದಿ ಕೇಳಿ ಕುಬೇರನೇ ಅಲ್ಲಿಗೆ ಬಂದ. ಆದರೆ ಅವನು ಹಸನ್ಮುಖಿಯಾಗಿಯೇ ಇದ್ದದನ್ನು ಕಂಡು ಭೀಮನಿಗೆ ಆಶ್ಚರ್ಯವಾಯಿತು. ಆಗ ಕುಬೇರನು ಮಣಿಮಂತನ ಶಾಪವನ್ನು ವಿವರಿಸುತ್ತಾನೆ. ಗೆಳೆಯನಿಗೆ ಶಾಪ ವಿಮೋಚನೆಯಾದುದನ್ನು ಕಂಡು ಸಂತೋಷಿಸುತ್ತಾನೆ.

             ಮಣಿಮಂತನಿಗೆ ಶಾಪ ನೀಡುವ ಸಂದಭ೵ದಲ್ಲಿ ಅಗಸ್ತ್ಯರು ಅವನನ್ನು ವಿಮಾನದಲ್ಲಿ ಕರೆತಂದುದಕ್ಕೆ ಕುಬೇರನಿಗೆ ಕೂಡ "ನಿನ್ನ ಸೇನೆ ಒಬ್ಬ ಮಾನವನಿಂದಲೇ ನಾಶವಾಗಲಿ" ಎಂದು ಶಾಪವಿತ್ತರೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. 

            

Friday, 20 June 2014

ಮುನಿ ರೈಭ್ಯ.....

        ಉಪರಿಚರ ವಸುವಿನ ಮಹಾಯಜ್ಞದಲ್ಲಿ ಸದಸ್ಯರಾದವರಲ್ಲಿ ಈ ರೈಭ್ಯ ಮಹರ್ಷಿಯು ಒಬ್ಬರು. ಇವರು ಪ್ರಸಿದ್ದ ಋಷಿ ಅಂಗೀರಸರ ಮಗ. ಮುನಿ ಭರಧ್ವಜರ ಮಿತ್ರರಾಗಿದ್ದವರು. ಇವರಿಗೆ ಅವಾ೵ವಸು ಮತ್ತು ಪರಾವಸು ಎಂಬ ಮಕ್ಕಳಿದ್ದರು. ರೈಭ್ಯನು ಬೃಹಸ್ಪತಿಯ ಬಳಿಗೇ ಹೋಗಿ ಮೋಕ್ಷವು ಕರ್ಮದಿಂದ ಸಿದ್ಧಿಸುತ್ತದೆಯೋ ಜ್ಞಾನದಿಂದ ಸಿದ್ಧಿಸುತ್ತದೆಯೋ ಎಂಬ ಬಗೆಗೆ ಆರೋಗ್ಯಕರವಾದ ಚರ್ಚೆ ನಡೆಸಿದ್ದನ್ನು ನೋಡಿದರೆ ಆತನ ಜ್ಞಾನದ ಮಟ್ಟ ಎಷ್ಟೆಂಬುದು ತಿಳಿಯುತ್ತದೆ.
     
             ಭರಧ್ವಜ ಮುನಿಯ ಮಗನಾದ ಯವಕ್ರೀತ ಮತ್ತು ರೈಭ್ಯನ ಮಕ್ಕಳು ಒಟ್ಟಿಗೆ ರೈಭ್ಯರ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅರ್ವಾವಸು ಮತ್ತು ಪರಾವಸು ಮಹಾಜ್ಞಾನಿಗಳಾಗಿದ್ದರು. ಆದರೆ ಇವರನ್ನು ಕಂಡರೆ ಯವಕ್ರೀತನಿಗೆ ಅಗಾದ ಅಸೂಹೆ. ಅಲ್ಲದೆ ವ್ಯಾಸಂಗ ಕಾಲದಲ್ಲಿ ತನ್ನ ಸಹಪಾಠಿಯಾಗಿದ್ದ ಪರಾವಸುವಿನ ಪತ್ನಿ ಕೃಷ್ಣೆಯ ಮೇಲೆ ಕಣ್ಣು ಹಾಕಿದ. ಈತನ ಬಲತ್ಕಾರದ ಪ್ರಯತ್ನವನ್ನು ತನ್ನ ಮಾವನಾದ ರೈಭ್ಯನಲ್ಲಿ ತಿಳಿಸಿದಳು. ಆಗ ರೈಭ್ಯನು ಒಂದು ಹೋಮವನ್ನು ಮಾಡಿ ಒಬ್ಬಳು ಸುರಾಸುಂದರಾಂಗಿಯನ್ನು ಮತ್ತು ಒಬ್ಬ ಘೋರ ರಾಕ್ಷಸಿಯನ್ನು ಸೃಷ್ಟಿಸಿದ. ಯವಕ್ರೀತನ ಕೈಯಲ್ಲಿ ಕಮಂಡಲವಿರುವತನಕ ಏನೂ ಮಾಡುವಂತಿಲ್ಲವಾದುದರಿಂದ ಸುಂದರಾಂಗಿಯನ್ನು ಕಳಿಸಿದಾಗ ಅವಳು ತನ್ನ ಮೈಮಾಟದಿಂದ ಅವನ ಕಣ್ಣು ತಪ್ಪಿಸಿ ಕಮಂಡಲವನ್ನು ಅಪಹರಿಸಿದಳು. ನಂತರ ರಾಕ್ಷಸಿಯು ಬಂದು ಯವಕ್ರೀತನನ್ನು ಸಂಹರಿಸಿದಳು. ಈ ಸುದ್ದಿಯನ್ನು ತಿಳಿದ ಭರಧ್ವಜರು ತನ್ನ ಗೆಳೆಯ ರೈಭ್ಯನಿಗೆ, " ನನ್ನ ಮಗನನ್ನು ಕೊಂದಿದ್ದೀಯೇ. ಈ ಪಾಪ ಕಾರ್ಯದ ಫಲವಾಗಿ ನಿನ್ನ ಮಗನಿಂದಲೇ ನಿನಗೆ ಸಾವು ಬರಲಿ" ಎಂದು ಶಾಪ ಕೊಟ್ಟರು.

              ನಂತರ ರೈಭ್ಯ ಮಗ ಪರಾವಸು ಒಮ್ಮೆ ಬೃಹದ್ಯುಮ್ನನೆಂಬ ರಾಜನ ಯಜ್ಞಕ್ಕೆ ಆಹ್ವಾನಿತನಾಗಿ ಹೊರಟಿದ್ದ. ಆಗ ಇನ್ನು ಬೆಳಗಿನ ಜಾವ. ಕತ್ತಲೆಯಲ್ಲಿ ಎದುರಿಗೆ ಯಾವುದೋ ಪ್ರಾಣಿ ತನ್ನ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ಭಾಸವಾಗಿ ಕತ್ತಲಲ್ಲಿ ಅದನ್ನು ಕೊಂದುಹಾಕಿದ. ಆದರೆ ಆನಂತರ ನೋಡಿದಾಗ ಸತ್ತದ್ದು ಪ್ರಾಣಿಯಲ್ಲ ತನ್ನ ತಂದೆ ರೈಭ್ಯ ಮುನಿಯೇ ಎಂದು ಆತನಿಗೆ ತಿಳಿಯಿತು. ತದನಂತರ ಅರ್ವಾವಸು ಆಗಿದ್ದ ಪ್ರಾಮಾದವನ್ನು ತಪ್ಪಿಸುವ ಸಂಕಲ್ಪದಿಂದ ತುಂಬ ಶದರದ್ದೆಯಿಂದ ೊಂದು ಹೋಮ ಮಾಡಿದ. ದೇವತೆಗಳು ಪ್ರಸನ್ನರಾದರು. ಅವರು ವರವನ್ನು ಕೇಳು ಎಂದಾಗ ತನ್ನ ತಂದೆ ರೈಭ್ಯ ಬದುಕಿ ಬರುವಂತೆ ವರವನ್ನು ಕೋರಿದ. ಪ್ರಸನ್ನರಾಗಿದ್ದ ದೇವತೆಗಳು ಅನಾ೵ವಸುವಿಗೆ ಆತ ಕೇಳಿದ ವರವನ್ನು ಕೊಟ್ಟರು. ಹೀಗೆ ಅರ್ವಾವಸುವಿನಿಂದಾಗಿ ರೈಭ್ಯ ಬದುಕಿ ಬಂದ.

ಕೃಪೆ: ಅ.ರಾ. ಮಿತ್ರರ ' ಮಹಾಭಾರತದ ಪಾತ್ರ-ಸಂಗತಿಗಳು' ಸಂಪುಟ-2
         


Wednesday, 18 June 2014

ರಾವಣ....

                
                         ರಾವಣ
                 ವಿಶ್ರವಸು ಎಂಬ ಋಷಿ ಮತ್ತು ದೈತ್ಯ ಕನ್ಯೆ ಕೇಕಸಿಯವರ ಗರ್ಭ ಸಂಜಾತವೇ ಮಹಾಪ್ರಚಂಡ ರಾವಣ. ಇವನಿಗೆ ಕುಂಭಕರ್ಣ ಮತ್ತು ವಿಭೀಷಣ ಎಂಬ ಇಬ್ಬರು ತಮ್ಮಂದಿರು ಮತ್ತು ಶೂರ್ಪನಖಿ ಮತ್ತು ಲಂಕಿಣಿ ಎಂಬ ಇಬ್ಬರು ತಂಗಿಯರು ಇದ್ದರು. ಈತ ಸುವರ್ಣ ಲಂಕೆಯಲ್ಲಿ ರಾಜ್ಯವಾಳುತ್ತಿದ್ದ ಕುಬೇರನನ್ನು ಸೋಲಿಸಿ ಪೂರ್ಣ ಲಂಕೆಯನ್ನು ತನ್ನದಾಗಿಸಿಕೊಂಡು 'ಲಂಕಾಧಿಪತಿ', 'ಲಂಕೇಶ' ಎಂದು ಬಿರುದಾಂಕಿತನಾಗಿದ್ದ. ಇವನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ತೋಳುಗಳು ಇದ್ದವೆಂದು ಹಲವಾರು ಗ್ರಂಥಗಳಲ್ಲಿ ಉಲ್ಲೇಖಗಳಿವೆ. ರಾವಣ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬ್ರಹ್ಮನನ್ನು ಕುರಿತು ಹತ್ತು ವರುಷಗಳ ಕಾಲ ತಪಸ್ಸನ್ನು ಆಚರಿಸಿದ್ದನೆಂದು ಹಲವಾರು ಲೇಖಕರು ಮತ್ತು ಕವಿಗಳು ಉಲ್ಲೇಖಿಸುತ್ತಾರೆ. ರಾವಣನಿಗೆ ತನ್ನ ವೀರತ್ವದ ಬಗ್ಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ ಹತ್ತು ವರುಷಗಳ ತಪಸ್ಸನ್ನು ಆಚರಿಸಿ ಬ್ರಹ್ಮನಿಂದ "ದೇವತೆಗಳಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದು, ಸಾಮಾನ್ಯ ಮನುಷ್ಯರಿಂದ ಮಾತ್ರ ಸಾಯಬೇಕು ನಾನು" ಎಂದು ವರ ಪಡೆಯತ್ತಾನೆ ಹಾಗೂ ಅವನ ನಾಭಿಯಲ್ಲಿ ಅಮೃತ ಕಳಸವಿತ್ತೆಂದು ರಾಮಾಯಣದಲ್ಲಿ ನಾವು ಕಾನಬಹುದು. ಆದರೆ ತಮ್ಮನ ಪಕ್ಷಾಂತರದಿಂದ ರಾಮನೊಂದಿಗೆ ಯುದ್ಧದಲ್ಲಿ ಹೋರಾಡಿ ಸಾಯುತ್ತಾನೆ.

              
ಆತ್ಮಲಿಂಗ

                 ಪುರಾಣಕಾಲದಲ್ಲಿ ಲಂಕಾಧೀಶನಾದ ದಾನವ ಚಕ್ರವರ್ತಿ ರಾವಣೇಶ್ವರ ತನ್ನ ತಾಯಿ ಕೈಕಸಾದೇವಿ ಸಮುದ್ರ ಕಿನಾರೆಯ ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಿರುವಾಗ ಪದೇ ಪದೇ ತೆರೆಗಳಿಂದ ಭಗ್ನವಾಗುವುದನ್ನು ಕಂಡು ಖಿನ್ನನಾದನಂತೆ. ತನ್ನ ಮಾತೆ ನಿತ್ಯವೂ ಶಿವನನ್ನು ಶ್ರದ್ಧೆ ಹಾಗೂ ನಿರಾಂತಕವಾಗಿ ಪೂಜಿಸುವಂತೆ ಮಾಡಲು ಕೈಲಾಸವಾಸಿ ಶಿವನ ಕುರಿತು ಉಗ್ರ ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆದುಕೊಂಡನಂತೆ. ರಾಜಧಾನಿ ತಲುಪುವವರೆಗೂ ಭೂಮಿಗೆ ಸ್ಪರ್ಶಿಸದಂತೆ ಕೊಂಡೊಯ್ಯಬೇಕು ಎಂದು ಶಿವ ತಿಳಿಸಿದ್ದನಂತೆ. ಲಂಕೆಯ ಮಾರ್ಗದಲ್ಲಿ ಪ್ರಯಾಣ ಬೆಳೆಸಿ ಗೋಕರ್ಣದ ಬಳಿ ಬಂದಾಗ ಸಂಧ್ಯಾವಂದನೆ ಸಮಯವಾಯಿತಂತೆ. ಶಿವನಿಗೆ ಅರ್ಘ್ಯಕೊಡಲು ಕೈಯಲ್ಲಿರುವ ಆತ್ಮಲಿಂಗವನ್ನು ಯಾರ ಬಳಿ ಕೊಡಲಿ ಎಂದು ಚಿಂತಿಸುತ್ತಿರುವಾಗ ದೇವತೆಗಳ ಪ್ರತಿ ತಂತ್ರದಂತೆ ದನಗಾಹಿ ವೇಷದಲ್ಲಿ ಗಣಪತಿ ಆಗಮಿಸಿದನಂತೆ, ಆಗ ರಾವಣನು ಗಣಪತಿಯ ಕೈಯಲ್ಲಿ ಆತ್ಮಲಿಂಗನನ್ನು ನೀಡಿ ತ್ವರಿತವಾಗಿ ಸಂಧ್ಯಾವಂದನೆ ಮಾಡಿ ಬರುವುದಾಗಿಯೂ, ಅಲ್ಲಿಯವರೆಗೆ ಜೋಪಾನವಾಗಿ ಕೈಲ್ಲಿ ಹಿಡಿದುಕೊಳ್ಳುವಂತೆಯೂ ತಿಳಿಸಿದಿನಂತೆ. ಸಂಜೆಯಾಗುತ್ತಿರುವ ಕಾರಣ ದನಗಳು ಹಿಂತಿರುಗಿದರೆ ೩ ಸಲ ಕೂಗಿ ಕರೆಯುವೆ. ಅಷ್ಟರೊಳಗೆ ಬರಬೇಕು. ಇಲ್ಲವಾದರೆ ಭೂಮಿಗೆ ಇಡುವುದಾಗಿ ಗಣಪತಿ ಕರಾರು ಹೇಳಿದ್ದನಂತೆ. ರಾವಣ ಸಂಧ್ಯಾವಂದನೆಗಾಗಿ ಸಮುದ್ರದ ಬಳಿ ಹೋಗುತ್ತದ್ದಂತೆ ೩ ಸಲ ಕೂಗಿ ಗಣಪತಿ ಆತ್ಮ ಲಿಂಗವನ್ನು ನೆಲಕ್ಕೆ ಇಟ್ಟನಂತೆ. ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ಆತ್ಮಲಿಂಗ ಆಳಕ್ಕೆ ಇಳಿಯತೊಡಗಿದಾಗ ರಾವಣ ಓಡೋಡಿ ಬಂದು ಕೀಳಲು ಯತ್ನಿಸಿದನಂತೆ, ಆಗ ಆತ್ಮಲಿಂಗ ಐದು ಚೂರುಗಳಾದವಂತೆ.  ಇದರ ಬಗ್ಗೆ ಶಿವಪುರಾಣದಲ್ಲಿ ವಿಸ್ತೃತ ವರ್ಣನೆಯಿದೆ.

ರಾಮಾಯಣದ ಆಗುಹೋಗುಗಳಿಗೆ ನಾಂದಿ ದಶರಥನ ಶಾಪ...

                 ಇಕ್ಷ್ವಾಕು ವಂಶದ ಮಹಾರಾಜ ದಶರಥ. ಅವನಾಳಿದ ರಾಜ್ಯದ ಹೆಸರು ಅಯೋಧ್ಯೆ. ಸರಯೂ ನದಿ ತೀರದ ರಾಜ್ಯವಿದು.    ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ) ಅಂದರೇ ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. 
                    ಒಂದು ದಿನ ಹುಣ್ಣಿಮೆ ಬೆಳದಿಂಗಳ ರಾತ್ರಿಯಲ್ಲಿ ದಶರಥನು ಕಾಡಿಗೆ ಬೇಟೆಗೆ ಹೋದಾಗ ಸರಯೂ ನದಿ ತೀರದಲ್ಲಿ ಯಾವುದೋ ಪ್ರಾಣಿ ನದಿಯ ನೀರನ್ನು ಕುಡಿಯುತ್ತಿದ್ದ ಶಬ್ದ ಕೇಳಿಸಿ, ಶಬ್ದವೇದಿ ವಿದ್ಯಾಪಾರಂಗತನಾದ ಈತ ಶಬ್ದವನ್ನು ಅನುಸರಿಸಿ ಅತ್ತ ಕಡೆಗೆ ಬಾಣವನ್ನು ಪ್ರಯೋಗಿಸಿದ. ಬಾಣ ಪ್ರಯೋಗಿಸಿದ ಮರುಕ್ಷಣವೇ 'ಅಯ್ಯೋ...ಅಮ್ಮ....' ಎಂದು ಯಾರೋ ಕೂಗಿಕೊಂಡರು. ತಕ್ಷಣವೇ ಎಚ್ಚೆತ್ತ ದಶರಥನು ನದಿ ತೀರಕ್ಕೆ ಹೋಗಿ ನೋಡಿದಾಗ ಒಬ್ಬ ಋಷಿಕುಮಾರನು ಬಾಣದ ಪೆಟ್ಟನ್ನು ತಾಳಲಾರದೆ, ನರಳುತ್ತ ನೆಲದ ಮೇಲೆ ಬಿದ್ದಿದ್ದನು. ಸಾವಿನಂಚಿನಲ್ಲಿದ್ದ ಆತನನ್ನು ಸಂತೈಸುತ್ತ ದಶರಥನು ಆತನ ಕ್ಷಮೆ ಯಾಚಿಸುತ್ತ, "ಋಷಿಕುಮಾರ, ನಾನು ದಶರಥ ಮಹಾರಾಜ, ನನ್ನಿಂದಾದ ಈ ಪ್ರಮಾದವನ್ನು ದಯವಿಟ್ಟು ಕ್ಷಮಿಸು, ತಿಳಿಯದೆ ಅಪಚಾರವೆಸಗಿಬಿಟ್ಟನು. ನನ್ನಿಂದೇನಾದರೂ ಸೇವೆ ಆಗಬೇಕೆಂದಿದ್ದಲ್ಲಿ ತಿಳಿಸು ಖಂಡಿತ ನೆರವೇರಿಸುತ್ತೇನೆ" ಎಂದು ಕೋರಿಕೊಂಡನು. ತನ್ನ ಪ್ರಾಣಕ್ಕೆ ಸಂಚಕಾರನಾಗಿದ್ದ ಮಹಾರಾಜನನ್ನು ಋಷಿಕುಮಾರನು ಕ್ಷಮಿಸುತ್ತಾ "ಮಹಾರಾಜ, ನಾನು ಶ್ರವಣಕುಮಾರ. ವೃದ್ಧರೂ, ಕುರುಡರೂ ಆದ ನನ್ನ ತಂದೆ ತಾಯಿಗಳನ್ನು ತೀರ್ಥಯೂತ್ರೆಗೆಂದು ಇಲ್ಲಿಗೆ ಕರೆತಂದಿದ್ದೆ. ಅವರಿಗೆ ನೀರು ತರಲೆಂದು ನದಿಗೆ ಬಂದಿದ್ದಾಗ, ಹೀಗಾಯಿತು. ಇನ್ನು ಅವರಿಗೆ ಯೂರು ದಿಕ್ಕು?" ಎಂದು ದುಃಖಿಸಿದನು. ಆಗ ದಶರಥನು ಋಷಿಕುಮಾರ, ಚಿಂತಿಸಬೇಡ, ನಾನು ನಿನ್ನ ತಂದೆ ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದು ವಚನವನ್ನಿತ್ತಾಗ, ಶ್ರವಣಕುಮಾರ ನಿಶ್ಚಿಂತೆಯಿಂದ ಪ್ರಾಣಬಿಟ್ಟನು.
                   ನಂತರ ನೀರು ತೆಗುದುಕೊಂಡು ಬಂದ ದಶರಥನ ಹೆಜ್ಜೆ ಸಪ್ಪಳವನ್ನು ಆಲಿಸಿದ ಶ್ರವಣಕುಮಾರನ ತಂದೆ ತಾಯಿ ಇಷ್ಟೊಂದು ತಡವಾಗಿ ಬರಲು ಕಾರಣವೆನೆಂದು ಕೇಳಲು ಆಗ ಮಹಾರಾಜ," ಕ್ಷಮಿಸಿ, ನಾನು ನಿಮ್ಮ ಮಗ ಶ್ರವಣನಲ್ಲ, ದಶರಥ ಮಹಾರಾಜ" ಎಂದನು. ಇದನ್ನು ಕೇಳಿದ ಅವರು ಗಾಬರಿಯಿಂದ ಏಕೆ? ಏನಾಯಿತು? ಎಂದು ಕೇಳಲು ದಶರಥ ಮಹಾರಾಜ ನಡೆದ ಸಂಗತಿಯನೆಲ್ಲಾ ತಿಳಿಸಿದನನು. ಸತ್ಯಸಂಗತಿ ತಿಳಿದ ವೃದ್ಧದಂಪತಿಗಳು ಕೋಪಗೊಂಡು ಪುತ್ರಶೋಕದಿಂದ ನಾವು ಹೇಗೆ ನರಳುತ್ತಿದ್ದೇವೆಯೋ ಹಾಗೇಯೇ ನೀನಗೂ ಕೂಡ ಪುತ್ರ ಶೋಕದಿಂದಲೇ ಸಾವು ಸಂಭವಿಸಲಿ ಎಂದು ಶಾಪವಿತ್ತರು. ಈ ಶಾಪದ ಪರಿಣಾಮವಾಗಿ ಮಂಥರೆಯ ಕುತಂತ್ರದಿಂದ ರಾಮ ಹದಿನಾಲ್ಕು ವರುಷ ವನವಾಸಕ್ಕೆ ಹೋಗುವಂತಾಯಿತು. ಇತ್ತ ತನ್ನ ಪ್ರೀತಿಯ ಮಗ ದೂರಾದ ಶೋಕದಿಂದಲೇ ದಶರಥನು ಸಾವನ್ನಪ್ಪಿದನು. ಹೀಗೆ ಋಷಿಕುಮಾರ ಶ್ರವಣಕುಮಾರನ ವೃದ್ಧ ತಂದೆ ತಾಯಿಗಳ ಶಾಪ ಪರಿಣಮಿಸಿತು.