Wednesday, 18 June 2014

ರಾವಣ....

                
                         ರಾವಣ
                 ವಿಶ್ರವಸು ಎಂಬ ಋಷಿ ಮತ್ತು ದೈತ್ಯ ಕನ್ಯೆ ಕೇಕಸಿಯವರ ಗರ್ಭ ಸಂಜಾತವೇ ಮಹಾಪ್ರಚಂಡ ರಾವಣ. ಇವನಿಗೆ ಕುಂಭಕರ್ಣ ಮತ್ತು ವಿಭೀಷಣ ಎಂಬ ಇಬ್ಬರು ತಮ್ಮಂದಿರು ಮತ್ತು ಶೂರ್ಪನಖಿ ಮತ್ತು ಲಂಕಿಣಿ ಎಂಬ ಇಬ್ಬರು ತಂಗಿಯರು ಇದ್ದರು. ಈತ ಸುವರ್ಣ ಲಂಕೆಯಲ್ಲಿ ರಾಜ್ಯವಾಳುತ್ತಿದ್ದ ಕುಬೇರನನ್ನು ಸೋಲಿಸಿ ಪೂರ್ಣ ಲಂಕೆಯನ್ನು ತನ್ನದಾಗಿಸಿಕೊಂಡು 'ಲಂಕಾಧಿಪತಿ', 'ಲಂಕೇಶ' ಎಂದು ಬಿರುದಾಂಕಿತನಾಗಿದ್ದ. ಇವನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ತೋಳುಗಳು ಇದ್ದವೆಂದು ಹಲವಾರು ಗ್ರಂಥಗಳಲ್ಲಿ ಉಲ್ಲೇಖಗಳಿವೆ. ರಾವಣ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬ್ರಹ್ಮನನ್ನು ಕುರಿತು ಹತ್ತು ವರುಷಗಳ ಕಾಲ ತಪಸ್ಸನ್ನು ಆಚರಿಸಿದ್ದನೆಂದು ಹಲವಾರು ಲೇಖಕರು ಮತ್ತು ಕವಿಗಳು ಉಲ್ಲೇಖಿಸುತ್ತಾರೆ. ರಾವಣನಿಗೆ ತನ್ನ ವೀರತ್ವದ ಬಗ್ಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ ಹತ್ತು ವರುಷಗಳ ತಪಸ್ಸನ್ನು ಆಚರಿಸಿ ಬ್ರಹ್ಮನಿಂದ "ದೇವತೆಗಳಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದು, ಸಾಮಾನ್ಯ ಮನುಷ್ಯರಿಂದ ಮಾತ್ರ ಸಾಯಬೇಕು ನಾನು" ಎಂದು ವರ ಪಡೆಯತ್ತಾನೆ ಹಾಗೂ ಅವನ ನಾಭಿಯಲ್ಲಿ ಅಮೃತ ಕಳಸವಿತ್ತೆಂದು ರಾಮಾಯಣದಲ್ಲಿ ನಾವು ಕಾನಬಹುದು. ಆದರೆ ತಮ್ಮನ ಪಕ್ಷಾಂತರದಿಂದ ರಾಮನೊಂದಿಗೆ ಯುದ್ಧದಲ್ಲಿ ಹೋರಾಡಿ ಸಾಯುತ್ತಾನೆ.

              
ಆತ್ಮಲಿಂಗ

                 ಪುರಾಣಕಾಲದಲ್ಲಿ ಲಂಕಾಧೀಶನಾದ ದಾನವ ಚಕ್ರವರ್ತಿ ರಾವಣೇಶ್ವರ ತನ್ನ ತಾಯಿ ಕೈಕಸಾದೇವಿ ಸಮುದ್ರ ಕಿನಾರೆಯ ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಿರುವಾಗ ಪದೇ ಪದೇ ತೆರೆಗಳಿಂದ ಭಗ್ನವಾಗುವುದನ್ನು ಕಂಡು ಖಿನ್ನನಾದನಂತೆ. ತನ್ನ ಮಾತೆ ನಿತ್ಯವೂ ಶಿವನನ್ನು ಶ್ರದ್ಧೆ ಹಾಗೂ ನಿರಾಂತಕವಾಗಿ ಪೂಜಿಸುವಂತೆ ಮಾಡಲು ಕೈಲಾಸವಾಸಿ ಶಿವನ ಕುರಿತು ಉಗ್ರ ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆದುಕೊಂಡನಂತೆ. ರಾಜಧಾನಿ ತಲುಪುವವರೆಗೂ ಭೂಮಿಗೆ ಸ್ಪರ್ಶಿಸದಂತೆ ಕೊಂಡೊಯ್ಯಬೇಕು ಎಂದು ಶಿವ ತಿಳಿಸಿದ್ದನಂತೆ. ಲಂಕೆಯ ಮಾರ್ಗದಲ್ಲಿ ಪ್ರಯಾಣ ಬೆಳೆಸಿ ಗೋಕರ್ಣದ ಬಳಿ ಬಂದಾಗ ಸಂಧ್ಯಾವಂದನೆ ಸಮಯವಾಯಿತಂತೆ. ಶಿವನಿಗೆ ಅರ್ಘ್ಯಕೊಡಲು ಕೈಯಲ್ಲಿರುವ ಆತ್ಮಲಿಂಗವನ್ನು ಯಾರ ಬಳಿ ಕೊಡಲಿ ಎಂದು ಚಿಂತಿಸುತ್ತಿರುವಾಗ ದೇವತೆಗಳ ಪ್ರತಿ ತಂತ್ರದಂತೆ ದನಗಾಹಿ ವೇಷದಲ್ಲಿ ಗಣಪತಿ ಆಗಮಿಸಿದನಂತೆ, ಆಗ ರಾವಣನು ಗಣಪತಿಯ ಕೈಯಲ್ಲಿ ಆತ್ಮಲಿಂಗನನ್ನು ನೀಡಿ ತ್ವರಿತವಾಗಿ ಸಂಧ್ಯಾವಂದನೆ ಮಾಡಿ ಬರುವುದಾಗಿಯೂ, ಅಲ್ಲಿಯವರೆಗೆ ಜೋಪಾನವಾಗಿ ಕೈಲ್ಲಿ ಹಿಡಿದುಕೊಳ್ಳುವಂತೆಯೂ ತಿಳಿಸಿದಿನಂತೆ. ಸಂಜೆಯಾಗುತ್ತಿರುವ ಕಾರಣ ದನಗಳು ಹಿಂತಿರುಗಿದರೆ ೩ ಸಲ ಕೂಗಿ ಕರೆಯುವೆ. ಅಷ್ಟರೊಳಗೆ ಬರಬೇಕು. ಇಲ್ಲವಾದರೆ ಭೂಮಿಗೆ ಇಡುವುದಾಗಿ ಗಣಪತಿ ಕರಾರು ಹೇಳಿದ್ದನಂತೆ. ರಾವಣ ಸಂಧ್ಯಾವಂದನೆಗಾಗಿ ಸಮುದ್ರದ ಬಳಿ ಹೋಗುತ್ತದ್ದಂತೆ ೩ ಸಲ ಕೂಗಿ ಗಣಪತಿ ಆತ್ಮ ಲಿಂಗವನ್ನು ನೆಲಕ್ಕೆ ಇಟ್ಟನಂತೆ. ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ಆತ್ಮಲಿಂಗ ಆಳಕ್ಕೆ ಇಳಿಯತೊಡಗಿದಾಗ ರಾವಣ ಓಡೋಡಿ ಬಂದು ಕೀಳಲು ಯತ್ನಿಸಿದನಂತೆ, ಆಗ ಆತ್ಮಲಿಂಗ ಐದು ಚೂರುಗಳಾದವಂತೆ.  ಇದರ ಬಗ್ಗೆ ಶಿವಪುರಾಣದಲ್ಲಿ ವಿಸ್ತೃತ ವರ್ಣನೆಯಿದೆ.

No comments:

Post a Comment