Wednesday, 18 June 2014

ರಾಮಾಯಣದ ಆಗುಹೋಗುಗಳಿಗೆ ನಾಂದಿ ದಶರಥನ ಶಾಪ...

                 ಇಕ್ಷ್ವಾಕು ವಂಶದ ಮಹಾರಾಜ ದಶರಥ. ಅವನಾಳಿದ ರಾಜ್ಯದ ಹೆಸರು ಅಯೋಧ್ಯೆ. ಸರಯೂ ನದಿ ತೀರದ ರಾಜ್ಯವಿದು.    ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ) ಅಂದರೇ ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. 
                    ಒಂದು ದಿನ ಹುಣ್ಣಿಮೆ ಬೆಳದಿಂಗಳ ರಾತ್ರಿಯಲ್ಲಿ ದಶರಥನು ಕಾಡಿಗೆ ಬೇಟೆಗೆ ಹೋದಾಗ ಸರಯೂ ನದಿ ತೀರದಲ್ಲಿ ಯಾವುದೋ ಪ್ರಾಣಿ ನದಿಯ ನೀರನ್ನು ಕುಡಿಯುತ್ತಿದ್ದ ಶಬ್ದ ಕೇಳಿಸಿ, ಶಬ್ದವೇದಿ ವಿದ್ಯಾಪಾರಂಗತನಾದ ಈತ ಶಬ್ದವನ್ನು ಅನುಸರಿಸಿ ಅತ್ತ ಕಡೆಗೆ ಬಾಣವನ್ನು ಪ್ರಯೋಗಿಸಿದ. ಬಾಣ ಪ್ರಯೋಗಿಸಿದ ಮರುಕ್ಷಣವೇ 'ಅಯ್ಯೋ...ಅಮ್ಮ....' ಎಂದು ಯಾರೋ ಕೂಗಿಕೊಂಡರು. ತಕ್ಷಣವೇ ಎಚ್ಚೆತ್ತ ದಶರಥನು ನದಿ ತೀರಕ್ಕೆ ಹೋಗಿ ನೋಡಿದಾಗ ಒಬ್ಬ ಋಷಿಕುಮಾರನು ಬಾಣದ ಪೆಟ್ಟನ್ನು ತಾಳಲಾರದೆ, ನರಳುತ್ತ ನೆಲದ ಮೇಲೆ ಬಿದ್ದಿದ್ದನು. ಸಾವಿನಂಚಿನಲ್ಲಿದ್ದ ಆತನನ್ನು ಸಂತೈಸುತ್ತ ದಶರಥನು ಆತನ ಕ್ಷಮೆ ಯಾಚಿಸುತ್ತ, "ಋಷಿಕುಮಾರ, ನಾನು ದಶರಥ ಮಹಾರಾಜ, ನನ್ನಿಂದಾದ ಈ ಪ್ರಮಾದವನ್ನು ದಯವಿಟ್ಟು ಕ್ಷಮಿಸು, ತಿಳಿಯದೆ ಅಪಚಾರವೆಸಗಿಬಿಟ್ಟನು. ನನ್ನಿಂದೇನಾದರೂ ಸೇವೆ ಆಗಬೇಕೆಂದಿದ್ದಲ್ಲಿ ತಿಳಿಸು ಖಂಡಿತ ನೆರವೇರಿಸುತ್ತೇನೆ" ಎಂದು ಕೋರಿಕೊಂಡನು. ತನ್ನ ಪ್ರಾಣಕ್ಕೆ ಸಂಚಕಾರನಾಗಿದ್ದ ಮಹಾರಾಜನನ್ನು ಋಷಿಕುಮಾರನು ಕ್ಷಮಿಸುತ್ತಾ "ಮಹಾರಾಜ, ನಾನು ಶ್ರವಣಕುಮಾರ. ವೃದ್ಧರೂ, ಕುರುಡರೂ ಆದ ನನ್ನ ತಂದೆ ತಾಯಿಗಳನ್ನು ತೀರ್ಥಯೂತ್ರೆಗೆಂದು ಇಲ್ಲಿಗೆ ಕರೆತಂದಿದ್ದೆ. ಅವರಿಗೆ ನೀರು ತರಲೆಂದು ನದಿಗೆ ಬಂದಿದ್ದಾಗ, ಹೀಗಾಯಿತು. ಇನ್ನು ಅವರಿಗೆ ಯೂರು ದಿಕ್ಕು?" ಎಂದು ದುಃಖಿಸಿದನು. ಆಗ ದಶರಥನು ಋಷಿಕುಮಾರ, ಚಿಂತಿಸಬೇಡ, ನಾನು ನಿನ್ನ ತಂದೆ ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದು ವಚನವನ್ನಿತ್ತಾಗ, ಶ್ರವಣಕುಮಾರ ನಿಶ್ಚಿಂತೆಯಿಂದ ಪ್ರಾಣಬಿಟ್ಟನು.
                   ನಂತರ ನೀರು ತೆಗುದುಕೊಂಡು ಬಂದ ದಶರಥನ ಹೆಜ್ಜೆ ಸಪ್ಪಳವನ್ನು ಆಲಿಸಿದ ಶ್ರವಣಕುಮಾರನ ತಂದೆ ತಾಯಿ ಇಷ್ಟೊಂದು ತಡವಾಗಿ ಬರಲು ಕಾರಣವೆನೆಂದು ಕೇಳಲು ಆಗ ಮಹಾರಾಜ," ಕ್ಷಮಿಸಿ, ನಾನು ನಿಮ್ಮ ಮಗ ಶ್ರವಣನಲ್ಲ, ದಶರಥ ಮಹಾರಾಜ" ಎಂದನು. ಇದನ್ನು ಕೇಳಿದ ಅವರು ಗಾಬರಿಯಿಂದ ಏಕೆ? ಏನಾಯಿತು? ಎಂದು ಕೇಳಲು ದಶರಥ ಮಹಾರಾಜ ನಡೆದ ಸಂಗತಿಯನೆಲ್ಲಾ ತಿಳಿಸಿದನನು. ಸತ್ಯಸಂಗತಿ ತಿಳಿದ ವೃದ್ಧದಂಪತಿಗಳು ಕೋಪಗೊಂಡು ಪುತ್ರಶೋಕದಿಂದ ನಾವು ಹೇಗೆ ನರಳುತ್ತಿದ್ದೇವೆಯೋ ಹಾಗೇಯೇ ನೀನಗೂ ಕೂಡ ಪುತ್ರ ಶೋಕದಿಂದಲೇ ಸಾವು ಸಂಭವಿಸಲಿ ಎಂದು ಶಾಪವಿತ್ತರು. ಈ ಶಾಪದ ಪರಿಣಾಮವಾಗಿ ಮಂಥರೆಯ ಕುತಂತ್ರದಿಂದ ರಾಮ ಹದಿನಾಲ್ಕು ವರುಷ ವನವಾಸಕ್ಕೆ ಹೋಗುವಂತಾಯಿತು. ಇತ್ತ ತನ್ನ ಪ್ರೀತಿಯ ಮಗ ದೂರಾದ ಶೋಕದಿಂದಲೇ ದಶರಥನು ಸಾವನ್ನಪ್ಪಿದನು. ಹೀಗೆ ಋಷಿಕುಮಾರ ಶ್ರವಣಕುಮಾರನ ವೃದ್ಧ ತಂದೆ ತಾಯಿಗಳ ಶಾಪ ಪರಿಣಮಿಸಿತು.

No comments:

Post a Comment