Wednesday, 25 June 2014

ಮಣಿಮಂತನಿಗೆ ಅಗಸ್ತ್ಯರ ಶಾಪ...

             ಒಮ್ಮೆ ಕುಶಾವತಿ ಎಂಬ ಪುಣ್ಯನದಿಯ ತೀರದಲ್ಲಿ ದೇವತೆಗಳು ಸತ್ರಯಾಗ ಮಾಡುತ್ತಿದ್ದಾಗ ಅಲ್ಲಿಗೆ ಕುಬೇರನು ತನ್ನ ಗೆಳೆಯ ಮಣಿಮಂತನನ್ನು ಕರೆದುಕೊಂಡು ಪುಷ್ಪಕವಿಮಾನದಲ್ಲಿ ಬರುತ್ತಿದ್ದ. ಆಗ ಕಾಳಿ ನದಿಯ ದಡದಲ್ಲಿ ಅಗಸ್ತ್ಯರು ಸೂರ್ಯನಮಸ್ಕಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮಣಿಮಂತ ಕೆಳಗೆ ಉಗುಳಿದ. ಅದು ನೇರವಾಗಿ ಅಗಸ್ತ್ಯರ ಮೇಲೆ ಬಿದ್ದಿತು. ಆಗ ಅಗಸ್ತ್ಯರಿಗೆ ಸಿಟ್ಟು ಬಂದು ಮಣಿಮಂತನಿಗೆ "ನಿನಗೆ ಮಾನವನಿಂದಲೇ ಸಾವು ಬರಲಿ" ಎಂದು ಶಾಪವಿತ್ತರು. 

             ಇದಾದ ಸ್ವಲ್ಪ ಸಮಯದ ನಂತರ ಪಾಂಡವರು ಅರಣ್ಯವಾಸದಲ್ಲಿದ್ದಾಗ ಕೆಲವು ದಿನಗಳ ಕಾಲ ಗಂಧಮಾದನ ಪ್ರದೇಶದಲ್ಲಿ ಪಾರ್ಷ್ಣಿಸೇನ ಮುನಿಯ ಆಶ್ರಮದಲ್ಲಿ ಸ್ವಲ್ಪ ಕಾಲ ತಂಗಿದ್ದರು. ಅಲ್ಲಿದ್ದಾಗ ಒಂದು ವಿಚಿತ್ರ ಘಟನೆ ನಡೆಯಿತು. ಗರುಡನು ಒಂದು ಸಪ೵ವನ್ನು ಕಚ್ಚಿಕೊಂಡು ಹಾರಿದಾಗ ರೆಕ್ಕೆಯ ರಭಸಕ್ಕೆ ಒಂದು ಮರ ಅಲುಗಾಡಿ ಅದರ ಹೂವು ಉದುರಿತು. ಅದು ಪಂಚವರ್ಣ ಸೌರಭದ ಕುಸುಮ. ಶ್ವೇತ ನದಿಯ ತೀರಪ್ರದೇಶದಲ್ಲಿ ದ್ರೌಪದಿಯ ವಸತಿಯ ಮುಂದೆ ಆ ಹೂವು ಬಿದ್ದಿತು. ಅದರ ಕಂಪಿಗೆ ಮಾರುಹೋದ ಆಕೆ ತನ್ನ ಆಸೆಯನ್ನು ಭೀಮನಲ್ಲಿ ಹೇಳಿಕೊಳ್ಳುತ್ತಾಳೆ. ಆಗ ಭೀಮನು ಆ ಹೂವನ್ನು ತರುವೆನೆಂದು ಅದನ್ನು ಹುಡುಕಿಕೊಂಡು ಹೊರಟನು. ಕೊನೆಗೆ ಅದು ಕುಬೇರನ ತೋಟದಲ್ಲಿ ಸಿಕ್ಕಿತು. ಶಂಖವನ್ನು ಊದಿಕೊಂಡು ಹೋಗುತ್ತಿದ್ದ ಭೀಮನ ಎದುರಿಗೆ ದೈತ್ಯ ಮಣಿಮಂತನು ಅಡ್ಡ ಬಂದು ಹೂವನ್ನು ಕೀಳದಂತೆ ಅಡ್ಡಿಪಡಿಸಿದ. ಅದನ್ನು ಕೇಳದ ಭೀಮನು ಅವನ ಮೇಲೆ ಹೋರಾಟಕ್ಕೆ ನಿಲ್ಲುತ್ತಾನೆ. ಇಬ್ಬರ ನಡುವೆ ಭೀಕರ ಕಾಳಗ ನಡೆದು ಭೀಮನ ಗದಾಘಾತದಿಂದ ಮಣಿಮಂತ ಸತ್ತ. ಮಣಿಮಂತನ ಸೋಲು ಮತ್ತು ಸಾವಿನ ಸುದ್ದಿ ಕೇಳಿ ಕುಬೇರನೇ ಅಲ್ಲಿಗೆ ಬಂದ. ಆದರೆ ಅವನು ಹಸನ್ಮುಖಿಯಾಗಿಯೇ ಇದ್ದದನ್ನು ಕಂಡು ಭೀಮನಿಗೆ ಆಶ್ಚರ್ಯವಾಯಿತು. ಆಗ ಕುಬೇರನು ಮಣಿಮಂತನ ಶಾಪವನ್ನು ವಿವರಿಸುತ್ತಾನೆ. ಗೆಳೆಯನಿಗೆ ಶಾಪ ವಿಮೋಚನೆಯಾದುದನ್ನು ಕಂಡು ಸಂತೋಷಿಸುತ್ತಾನೆ.

             ಮಣಿಮಂತನಿಗೆ ಶಾಪ ನೀಡುವ ಸಂದಭ೵ದಲ್ಲಿ ಅಗಸ್ತ್ಯರು ಅವನನ್ನು ವಿಮಾನದಲ್ಲಿ ಕರೆತಂದುದಕ್ಕೆ ಕುಬೇರನಿಗೆ ಕೂಡ "ನಿನ್ನ ಸೇನೆ ಒಬ್ಬ ಮಾನವನಿಂದಲೇ ನಾಶವಾಗಲಿ" ಎಂದು ಶಾಪವಿತ್ತರೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. 

            

No comments:

Post a Comment