Thursday, 11 September 2014

ರುದ್ರ-ಬ್ರಹ್ಮರಿಗೆ ಋಷಿ ಶಾಪ...

          ಒಮ್ಮೆ ತಪೋ ಧನರಾದ ಮಹರ್ಷಿಗಳೆಲ್ಲಾ ಒಂದೆಡೆ ಸೇರಿದಾಗ 'ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು' ಎಂಬ ವಿಷಯದ ಬಗ್ಗೆ ವಾಗ್ವಾದ ನಡೆಯಿತು. ಆಗ ಇದನ್ನು ತೀರ್ಮಾನಿಸುವ ಹೊಣೆಯನ್ನು ಭೃಗು ಮಹರ್ಷಿಗೆ ವಹಿಸಲಾಯಿತು. ಶೀಘ್ರಕೋಪಿಯಾದ ಭೃಗುವು ತನಗೆ ಕೊಟ್ಟಿದ್ದ ಕರ್ತವ್ಯವನ್ನು ಪಾಲಿಸಲು ಮೊದಲು ಸತ್ಯಲೋಕಕ್ಕೆ ಹೋಗಿ ಬ್ರಹ್ಮದೇವನ ಮುಂದೆ ನಿಂತನು. ಆ ಸಮಯದಲ್ಲಿ ವಾಗ್ದೇವಿಯು ಮೆಲು ಸ್ವರದಲ್ಲಿ ಮಧುರವಾಗಿ ವೀಣಾವಾದನ ಮಾಡುತ್ತಿದ್ದು  ಬ್ರಹ್ಮದೇವನು ಆ ಗುಂಗಿನಲ್ಲೇ ಪರವಶನಾಗಿದ್ದನು. ಭೃಗುವು ಬಹಳ ಹೊತ್ತು ಕಾದರೂ ಬ್ರಹ್ಮನು ಮಹರ್ಷಿಯ ಕ್ಷೇಮ ಸಮಾಚಾರಗಳನ್ನು ವಿಚಾರಿಸಲಿಲ್ಲ. ಇದರಿಂದ ಕುಪಿತನಾದ ಭೃಗುವು 'ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ' ಎಂದು ಶಪಿಸಿದನು.
         ಅಲ್ಲಿಂದ ನೇರವಾಗಿ ಕೈಲಾಸಕ್ಕೆ ಹೋಗಿ ಶಿವ ಪಾರ್ವತಿಯರ ಮುಂದೆ ನಿಂತನು. ಆ ಸಮಯದಲ್ಲಿ ಶಿವ ಪಾರ್ವತಿಯರು ನೃತ್ಯದಲ್ಲಿ ತಲ್ಲೀನರಾಗಿದ್ದು ಅವರೂ ಸಹ ಭೃಗು ಮಹರ್ಷಿಯನ್ನು ವಿಚಾರಿಸಲಿಲ್ಲ. ಇದರಿಂದ ಮತ್ತಷ್ಟು ಕುಪಿತನಾದ ಭೃಗುವು 'ನಿನ್ನ ಲಿಂಗಾಕಾರಕ್ಕೆ ಮಾತ್ರ ಭೂಲೋಕದಲ್ಲಿ ಪೂಜೆಯಾಗಲಿ' ಎಂದು ಶಪಿಸಿದನು.

Tuesday, 5 August 2014

ಚಕ್ರ ಮತ್ತು ಗಾಂಡೀವ.....

           ಪಾಂಡವರ ರಾಜಧಾನಿ ಇಂದ್ರಪ್ರಸ್ಥ. ಖಾಂಡವವನ ಇಲ್ಲಿನ ಒಂದು ತೋಟ. ಇದಕ್ಕೆ ಖಾಂಡವಪ್ರಸ್ಥ ಎಂಬ ಹೆಸರು ಇದೆ. ಖಾಂಡವವನ ದೇವೇಂದ್ರನದು ಆದ್ದರಿಂದ ಇಂದ್ರಪ್ರಸ್ಥ ಎಂಬ ಹೆಸರು ಬಂದಿರಬಹುದು. ಒಮ್ಮೆ ಕೃಷ್ಣಾರ್ಜುನರು ಯಮುನ ನದಿಯ ತೀರದಲ್ಲಿ ವಿಹರಿಸುತ್ತಿದ್ದಾಗ ಅಗ್ನಿದೇವನು ಬ್ರಾಹ್ಮಣ ವೇಷದಲ್ಲಿ ಬಂದು ಶ್ವೇತಕಿ ಎಂಬ ರಾಜನು ಮಾಡಿದ ಯಜ್ಞದ ಹವಿಸ್ಸನ್ನು ತಿಂದು ತಿಂದು ಅಜೀರ್ಣವಾಗಿದ್ದರಿಂದ ದಿವ್ಯ ಔಷಧಗಳ ನಿಲಯವಾದ ಖಾಂಡವವನವನ್ನು ಸುಟ್ಟು ತಿಂದರೆ ಅಜೀರ್ಣ ವಾಸಿಯಾಗುವುದೆಂದು ಬ್ರಹ್ಮವೈದ್ಯನು ಸಲಹೆ ನೀಡಿರುವುದಾಗಿ ತಿಳಿಸಿ ಈಗಾಗಲೇ ಏಳು ಬಾರಿ ಪ್ರಯತ್ನಿಸಿದರೂ ದೇವೇಂದ್ರನು ಅವನ ಪ್ರಯತ್ನಗಳನ್ನೆಲ್ಲಾ ಭಂಗಗೊಳಿಸಿದ ಕಾರಣ ಅವರಿಂದ ಸಹಾಯ ಯಾಚಿಸಿದನು. ಇದಕ್ಕೆ ಕೃಷ್ಣಾರ್ಜುನರು ಒಪ್ಪಿದರು. ಅದಕ್ಕಾಗಿ ಅಗ್ನಿದೇವನು ಅವರಿಬ್ಬರಿಗೆ ಯುದ್ಧ ಸಾಮಾಗ್ರಿಗಳನ್ನು ದಾನ ನೀಡಿ, ಕೃಷ್ಣನಿಗೆ ಚಕ್ರವನ್ನು ಮತ್ತು ಅರ್ಜುನನಿಗೆ ಗಾಂಡೀವ ಬಿಲ್ಲನ್ನು ವರವಾಗಿ ಕರುಣಿಸಿದ. ಅಗ್ನಿ ಒಂದು ಕಡೆಯಿಂದ ಸುಟ್ಟುಕೊಂಡು ಬರುವುದು, ಕೃಷ್ಣಾರ್ಜುನರು ಸುತ್ತಾಲೂ ಓಡಾಡುತ್ತಾ ಮೃಗಪಕ್ಷಿ ಯಾವುದೂ ತಪ್ಪಿಸಿಕೊಂಡು ಹೋಗದಂತೆ ಕಾವಲಿರುವುದು ಅವರ ಸ್ಥೂಲ ಒಪ್ಪಂದವಾಗಿತ್ತು. ಅಗ್ನಿಯು ಸುಡಲು ಪ್ರಾರಂಭಿಸುತ್ತಿದ್ದಂತೆ ಇಂದ್ರನು ಯುದ್ಧಕ್ಕೆ ಬಂದನು. ವರುಣನನ್ನು ಕರೆಯಿಸಿ ಮಳೆ ಸುರಿಸುವಂತೆ ಆಜ್ಞಾಪಿಸಿದನು. ಆದರೆ ಕೃಷ್ಣಾರ್ಜುನರು ಆಕಾಶಕ್ಕೆ ದೊಡ್ಡದೊಂದು  ತಡಿಕೆಯನ್ನು ನಿರ್ಮಿಸಿ ತೋಟ ನೆನೆಯದಂತೆ ನೋಡಿಕೊಂಡರು. ಹೀಗೆ ಇವರಿಬ್ಬರೂ ಒಂದು ವರ್ಷದವರೆಗೆ ಜಲವರ್ಷ, ಶಿಲಾವರ್ಷಗಳನ್ನು ತಮ್ಮ ಅಸ್ತ್ರಗಳಿಂದ ತಡೆದರು. ಕೃಷ್ಣಾರ್ಜುನರು ಮಣಿಯದಿದ್ದುದನ್ನು ಕಂಡು ಇಂದ್ರನು ಅವರಿಬ್ಬರೊಂದಿಗೆ ಸಂಧಾನ ಮಾಡಿಕೊಂಡನು.

ಗ್ರಂಥ ಋಣ: ಮಹಾಭಾರತದ ಪಾತ್ರ ಸಂಗತಿಗಳು, ಅ.ರಾ. ಮಿತ್ರ

Thursday, 3 July 2014

ಕದ್ರು-ಸರ್ಪ ವಿನುತೆ-ಗರುಡ.....

ಕಶ್ಯಪನ ಪತ್ನಿಯರಾದ ಕದ್ರು ಮತ್ತು ವಿನುತೆಯರು ಅಕ್ಕ ತಂಗಿಯರು. ಸಮುದ್ರ ಮಂಥನದ ಕಾಲದಲ್ಲಿ ಹುಟ್ಟಿದಉಚ್ಚೈಶ್ರವಸ್ಎಂಬ ಕುದುರೆಯನ್ನು ನೋಡಲು ಹೊರಟ ಇವರು ಕುದುರೆಯ ಬಾಲ ಕಪ್ಪಾಗಿದೆ ಎಂದು ಕದ್ರು, ಇಲ್ಲವೆಂದು ವಿನುತೆ ವಾಗ್ವಾದ ನಡೆಸುತ್ತಿದ್ದರು. ಆಗ ಸೋತವರು ಗೆದ್ದವರ ದಾಸಿಯಾಗಬೇಕೆಂದು ಪಂಥ ತೊಟ್ಟರು. ಪಂಥದಲ್ಲಿ ಗೆಲ್ಲಲು ಕದ್ರುವು ಈಗಾಗಲೇ ಕಶ್ಯಪನಿಂದ ವರವಾಗಿ ಪಡೆದ ಸಾವಿರಾರು ಸರ್ಪಪುತ್ರರನ್ನು ಕರೆದು ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಆಜ್ಞಾಪಿಸಿದಳು. ಆದರೆ ಸರ್ಪಕುಲದಲ್ಲಿ ವಿವೇಕಶಾಲಿಯಾದ ವಾಸುಕಿ ಮಾತನ್ನು ಧಿಕ್ಕರಿಸಿದ. ಉಳಿದವರು ಅವನಂತಯೇ ನಡೆದರು. ಇದಕ್ಕೆ ಕುಪಿತಳಾದ ಕದ್ರುವು ತನ್ನ ಮಾತನ್ನು ಕೇಳದ ಮಕ್ಕಳು ಏಕೆ ಬದುಕಿರಬೇಕೆಂದು, “ನೀವೆಲ್ಲಾ ಜನಮೇಜಯರಾಯನು ನಡೆಸುವ ಯಜ್ಞದಲ್ಲಿ ಯಜ್ಞಕುಂಡದಲ್ಲಿ ಬಿದ್ದು ಸಾಯಿರಿಎಂದು ಶಾಪವಿತ್ತಳು. ಆದರೆ ಸಾವಿರ ಮಕ್ಕಳ ಪೈಕಿಕರ್ಕೋಟಕನೆಂಬ ಸರ್ಪ ಮಾತ್ರ ಶಾಪಕ್ಕೆ ಹೆದರಿ ಯಾರಿಗೂ ಕಾಣದೆ ಕುದುರೆಯ ಬಾಲಕ್ಕೆ ನೇತುಬಿದ್ದ. ಇದರಿಂದ ಕುದುರೆಯ ಬಾಲ ಕಪ್ಪಾಗಿ ಕಂಡಿತು. ಹೀಗಾಗಿ ವಿನುತೆಯು ಕದ್ರುವಿನ ದಾಸಿಯಾಗ ಬೇಕಾಯಿತು. ಇದನ್ನು ತಿಳಿದ ವಿನುತೆಯ ಮಗ ಗರುಡ ತಾಯಿಯನ್ನು ದಾಸ್ಯದಿಂದ ಬಿಡಿಸಲು ಏನು ಮಾಡಬೇಕೆಂದು ಕೇಳಿದಾಗ ದೇವಲೋಕದಿಂದ ಅಮೃತವನ್ನು ತಂದುಕೊಡಬೇಕೆಂದು ನಾಗಗಳು ಷರತ್ತು ಹಾಕಿದವು. ಇದನ್ನು ಒಪ್ಪಿಕೊಂಡ ಗರುಡನು ಆಕಾಶಕ್ಕೆ ಹಾರಿ ದೇವತೆಗಳನ್ನು ಸೋಲಿಸಿ ಅಮೃತ ಕುಂಭವನ್ನು ಹೊತ್ತುಕೊಂಡು ಹೊರಟನು. ಮಾರ್ಗ ಮಧ್ಯದಲ್ಲಿಈತನ ಪರಾಕ್ರಮಕ್ಕೆ ಮೆಚ್ಚಿ ಮಹಾವಿಷ್ಣುವಿನ ಕೋರಿಕೆಯಂತೆ ಆತನ ವಾಹನವಾಗಲು ಒಪ್ಪಿಕೊಂಡನು. ಮುಂದೆ ಇಂದ್ರನೊಡನೆ ಯುದ್ಧ ಮಾಡುವಾಗ ಆತನ ವಜ್ರಾಯುದದ ಹೊಡೆತದಿಂದ ಗರುಡನ ಒಂದು ಗರಿ ಭೂಮಿಗೆ ಬಿದ್ದುದ್ದರಿಂದ ಗರುಡನಿಗೆ ಸುಪರ್ಣ ಎಂದು ಹೆಸರಾಯಿತು. ಇಂದ್ರನು ಗರುಡನ ಮನೋಭಿಪ್ರಾಯವನ್ನು ಮೆಚ್ಚಿಸರ್ಪಭಕ್ಷಕನಾಗುಎಂದು ವರ ಕೊಟ್ಟನು.
ನಂತರ ಅಮೃತಕಲಶವನ್ನು ನಾಗಗಳಿಗೆ ಕೊಟ್ಟು ತನ್ನ ತಾಯಿಯನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದನು. ಆದರೆ ಸರ್ಪಗಳು ಸ್ನಾನ ಮಾಡಿಕೊಂಡು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ಕೊಡವನ್ನು ಅಪಹರಿಸಿದ್ದನು. ಸರ್ಪಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದೆಂದು ದರ್ಭೆಯನ್ನು ನೆಕ್ಕಿದ್ದರಿಂದ ಅವುಗಳಿಗೆಸೀಳುನಾಲಿಗೆಬಂದಿತೆಂದು ಉಲ್ಲೇಖಗಳಿವೆ.  

Tuesday, 1 July 2014

ಕಚ-ದೇವಯಾನಿ

     ದೇವಗುರು ಬೃಹಸ್ಪತಿಯ ಮಗ ಕಚ. ದಾನವ ಗುರು ಶುಕ್ರಾಚಾರ್ಯ ಮಗಳು ದೇವಯಾನಿ. ದೇವ-ದಾನವರ ಯುದ್ಧದಲ್ಲಿ ದಾನವರು ಸತ್ತಾಗ ಬಳಿ ಸಂಜೀವಿನಿ ವಿದ್ಯೆಯಿದ್ದ ಕಾರಣ ಅದರ ಸಹಾಯದಿಂದ ಸತ್ತ ದಾನವರನ್ನು ಬದುಕಿಸುತ್ತಿದ್ದರು. ದೇವಗುರುವಿಗೆ ಈ ವಿದ್ಯೆ ತಿಳಿಯದ ಕಾರಣ ಅವರು ಒಂದು ತಂತ್ರ ಹೂಡುತ್ತಾರೆ. ಅದರಂತೆ ತನ್ನ ಮಗ ಕಚನಿಗೆ, " ನೀನು ಶುಕ್ರಾಚಾರ್ಯ ಬಳಿಗೆ ಹೋಗು. ದೇವಯಾನಿ ಮತ್ತು ಶುಕ್ರಾಚಾಯ೵ರನ್ನು ಪ್ರಸನ್ನಗೊಳಿಸಿ ಅವರೊಂದಿಗಿದ್ದು ಸಂಜೀವಿನಿ ವಿದ್ಯೆಯನ್ನು ಕಲಿತು ಬಾ" ಎಂದರು. ಅಷ್ಟೇ ಅಲ್ಲದೆ ಮೃತಸಂಜೀವಿನಿ ವಿದ್ಯೆಯನ್ನು ಕಲಿತು ಬಂದರೆ ತಮ್ಮೊಂದಿಗೆ ಆತನಿಗೂ ಸಹ ಹವಿರ್ಭಾಗದಲ್ಲಿ ಪಾಲು ಸಿಕ್ಕುತ್ತದೆ ಎಂದು ಆಶ್ವಾಸನೆ ನೀಡಿದರು.

     ನಂತರ ದಾನವರ ರಾಜಧಾನಿಯಾದ ವೃಷಪರ್ವಕ್ಕೆ ಬಂದು ಒಂದು ಸಾವಿರ ವರುಷ ಬ್ರಹ್ಮಚಯ೵ ವೃತವನ್ನು ಪಾಲಿಸುವುದಾಗಿ  ಶುಕ್ರಾಚಾಯ೵ರ ಶಿಷ್ಯನಾದ. ಹಾಡು, ಕುಣಿತ ಮತ್ತು ವಾದ್ಯಗಳಲ್ಲಿ ಪ್ರವೀಣನಾಗಿ ದೇವಯಾನಿಗೂ ಬೇಕಾದವನಾದ. ಆದರೆ ರಾಕ್ಷಸರಿಗೆ ಇತನ ಮೇಲೆ ಸಂಶಯ ಬಂದು ಒಂದು ದಿನ ಕಚನು ದನ ಮೇಯಿಸುತ್ತಿದ್ದಾಗ ಅವನನ್ನು ಕತ್ತರಿಸಿ ನಾಯಿಗಳಿಗೆ ಹಾಕಿದರು. ಆದರೆ ದೇವಯಾನಿ ತಂದೆಯ ಬಳಿ ಹೋಗಿ, " ಆತನಿಲ್ಲದೆ ನಾನು ಬದುಕಿರಲಾರೆ" ಎಂದಾಗ ಶುಕ್ರಾಚಾರ್ಯರು ಅವನನ್ನು ಬದುಕಿಸಿದರು. ಎರಡನೆ ಬಾರಿ ಕಚನನ್ನು ತುಂಡುಮಾಡಿ ಸಮುದ್ರಕ್ಕೆ ಎಸೆದಾಗಲು ಮಗಳ ಕಾರಣದಿಂದ ದಾನವಗುರು ಅವನನ್ನು ಬದುಕಿಸಿದರು. ಮೂರನೆ ಬಾರಿ ಅಸುರರು ಅವನನ್ನು ಕೊಂದದ್ದು ಮಾತ್ರವಲ್ಲದೇ ಅವನ ದೇಹವನ್ನು ಸುಟ್ಟು ಬೂದಿ ಮಾಡಿ ಮದ್ಯದಲ್ಲಿ ಹಾಕಿ ಶುಕ್ರಾಚಾಯ೵ರಿಗೇ ಕುಡಿಸಿದರು. ಅವರ ಹೊಟ್ಟೆಯೊಳಗಿಂದಲೇ ಕಚನು ಕೂಗಿದಾಗ ಮತ್ತೆ ದೇವಯಾನಿಯ ಪ್ರಾರ್ಥನೆಯಂತೆ ಆವನನ್ನು ಬದುಕಿಸಿ ಅವರು, " ಇನ್ನು ಮುಂದೆ ಬ್ರಾಹ್ಮಣರು ಮದ್ಯ ಸೇವಿಸಿದರೆ ಅವರಿಗೆ ಬ್ರಾಹ್ಮಣನನ್ನು ಕೊಂದ ಪಾಪ ಬರಲಿ" ಎಂದು ಘೋಷಿಸಿದರು. ನಂತರ ಕಚನು ಆಚೆ ಬಂದು ಮತ್ತೆ ಸೀಳಿದ ಗುರುಗಳ ಹೊಟ್ಟೆಯನ್ನು ಸರಿಪಡಿಸಿದ. ಮುಂದೆ ಒಂದು ಸಾವಿರ ವರುಷ ಅವರೊಂದಿಗಿದ್ದು ಸಂಜೀವಿನಿ ವಿದ್ಯೆ ಕಲಿತು ಅಲ್ಲಿಂದ ಹೊರುಡುತ್ತಾನೆ. ಆ ವೇಳೆಗಾಗಲೇ ದೇವಯಾನಿ ಅವನನ್ನು ಪ್ರೀತಿಸಲು ಆರಂಭಿಸಿದ್ದಳು. ಅವನನ್ನು ಮದುವೆಯಾಗಬಯಸಿದಳು. ಆದರೆ ಆತ ತಾನು ಆಕೆಯ ಜೊತೆ ಸೋದರನಂತೆ ಬೆಳೆದಿರುವುದಾಗಿ ಹೇಳಿ ಆಕೆಯನ್ನು ತಿರಸ್ಕರಿಸಿದಾಗ ಅವನು ಕಲಿತ ಮೃತಸಂಜೀವಿನಿ ವಿದ್ಯೆ ಆತನ ಪ್ರಯೋಜನಕ್ಕೆ ಬಾರದಿರಲಿ ಎಂದು ಶಾಪವಿತ್ತಳು. ಆಗ ಕೆರಳಿದ ಕಚನು , " ಯಾವ ಋಷಿಪುತ್ರನೂ ನಿನ್ನ ಕೈ ಹಿಡಿಯದಿರಲಿ, ನನಗೆ ವಿದ್ಯೆಯ ಫಲ ಸಿಕ್ಕದಿದ್ದರೂ ನಾನು ಹೇಳಿಕೊಡುವ ಶಿಷ್ಯರಿಗೆ ಆ ಸಂಪತ್ತು ಲಭಿಸುವಂತಾಗಲಿ" ಎಂದು ಹೇಳಿದ.

          ಕಚನ ಶಾಪದಂತೆ ದೇವಯಾನಿ ಬ್ರಾಹ್ಮಣನನ್ನು ಬಿಟ್ಟು ಕ್ಷತ್ರಿಯನಾದ  ಯಯಾತಿಯನ್ನು ಮದುವೆಯಾಗಬೇಕಾಯಿತು. ಮೃತಸಂಜೀವಿನಿಯಿಂದ ಕಚನಿಗೆ ಏನೂ ಪ್ರಯೋಜನವಾಗದಿದ್ದರೂ ಆದಿ ಪವ೵ದಲ್ಲಿ ಅವನು ಈ ವಿದ್ಯೆಯನ್ನು ದೇವತೆಗಳಿಗೆ ಕಲಿಸಿಕೊಟ್ಟನು. 
    

ಅಷ್ಟಾವಕ್ರ....

                  ಏಕಪಾದ ಮತ್ತು ಸುಜಾತೆಯರ ಮಗನೇ ಅಷ್ಟಾವಕ್ರದೇಹದ ಎಂಟು ಅಂಗಗಳಲ್ಲಿ ವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ್ದರಿಂದ ಅಷ್ಟಾವಕ್ರನೆಂದು ಪ್ರಖ್ಯಾತನಾದ. ಏಕಪಾದರಿಗೆ ಖದೋರ ಎಂಬ ಹೆಸರು ಇದ್ದು ಅವರು ಸದಾ ವಿದ್ಯಾರ್ಥಿಗಳನ್ನು ವೇದಪಾಠ ಕಲಿಯುವಂತೆ ಒತ್ತಾಯಿಸುತ್ತಿದ್ದುದು ತಾಯಿಯ ಗರ್ಭದಲ್ಲಿದ್ದ ಅಷ್ಟಾವಕ್ರನಿಗೆ ಸರಿಬರದೆ ಅಪ್ಪನನ್ನು ಅಪೇಕ್ಷಿಸುತ್ತದೆ. ಇದರಿಂದ ಕೆರಳಿದ ಅಪ್ಪ, " ನೀನು ವಕ್ರವಾಗಿ ಮಾತಾಡಿದ್ದೀಯೆ ಆದ್ದರಿಂದ ಅಷ್ಟಾವಕ್ರನಾಗಿ ಹುಟ್ಟು" ಎಂದು ಶಾಪವಿತ್ತ. ನಂತರ ಮಗನನ್ನು ಸಾಕಲು ಹೆಣಗಬೇಕೆಂದು ಏಕಪಾದನು ಜನಕನ ಆಸ್ಥಾನಕ್ಕೆ ಹೋಗಿ ಅಲ್ಲಿ ವಾದದಲ್ಲಿ ಸೋತು ನೀರಿನಲ್ಲಿ ಮುಳುಗಿ ಸತ್ತ. ಮುಂದೆ ಉದ್ದಾಲಕರಲ್ಲಿ ವಿದ್ಯಾಭ್ಯಾಸ ಮುಗಿಸಿದ ಅಷ್ಟಾವಕ್ರನು ತನ್ನ ತಂದೆಗೆ ಬಂದ ಪಾಡನ್ನು ತಿಳಿದು ತನ್ನ ಸ್ನೇಹಿತ ಉದ್ದಾಲಕರ ಮಗನಾದ ಶ್ವೇತಕೇತುವಿನ ಜೊತೆಗೆ ಮಿಥಿಲೆಗೆ ಹೋದ. ಅಲ್ಲಿ ದೊಡ್ಡ ದೊಡ್ಡ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ, ನಂತರ ವರುಣನ ಪುತ್ರನಾದ ನಂದಿಯ ಜೊತೆ ವಾದಕ್ಕೆ ಇಳಿದು ಅವನನ್ನು ಸೋಲಿಸಿದ. ನಂದಿ ಸೋತ ಕಾರಣ ಅವನಿಗೆ ನೀರಿನಲ್ಲಿ ಮುಳುಗುವುದು ಅನಿವಾರ್ವಾಯಯಿತು.ಅವನು ನೀರಿನಲ್ಲಿ ಮುಳುಗಿದ ತಕ್ಷಣ ಅಷ್ಟಾವಕ್ರನ ತಂದೆಯಾದ ಏಕಪಾದನು ಬದುಕಿ ಬಂದ. ಹೀಗೆ ತನ್ನ ತಂದೆಯನ್ನು ಉಳಿಸಿಕೊಂಡು, ಸಮುದ್ದದೊಳಗಿದ್ದ ಬಂಧಿಗಳನ್ನು ಬಿಡಿಸಿಕೊಂಡು ಊರಿಗೆ ಹಿಂತಿರುಗಿದರು.

                       ಅಷ್ಟಾವಕ್ರನ ಬಗೆಗೆ ಬ್ರಹ್ಮವೈವರ್ಪುತಪುರಾಣ ಬೇರೆ ರೀತಿಯಲ್ಲಿ ಹೇಳುತ್ತದೆ. ಅಸಿತನ ಮಗ ದೇವಲ. ಅವನನ್ನು ಕಂಡು ರಂಭೆ ಮೋಹಿಸುತ್ತಾಳೆ. ಆದರೆ ಅವಳನ್ನು ಅವನು ತಿರಸ್ಕರಿಸಿದಾಗ ಅಷ್ಟಾವಕ್ರನಾಗುವಂತೆ ಶಾಪವಿತ್ತಳು. ಮುಂದೆ ಶ್ರೀಕೃಷ್ಣ-ರಾಧೆಯರು ಇವನ ಎದಯರಿಗೆ ನಿಂತಾಗ ಶ್ರೀಕೃಷ್ಣನ ಆಲಿಂಗನದಿಂದ ಅಷ್ಟಾವಕ್ರತ್ವ ಹೋಗಿ ದೇವಲನು ಸುಂದರ ಪುರುಷನಾದ ಎಂದು ತಿಳಿಸುತ್ತದೆ.

                               ಅಗ್ನಿಪುರಾಣದ ಪ್ರಕಾರ ಈ ಅಷ್ಟಾವಕ್ರನ ದೇಹದ ಕುರೂಪತೆಯನ್ನು ಕಂಡು ರಂಭೆ ಮೊದಲಾದ ಅಪ್ಸರೆಯರು ನಕ್ಕರಂತೆ. ಈ ತಪ್ಪಿಗಾಗಿ ಅವರು ಮುಂದೆ ಕೃಷ್ಣ ಪತ್ನಿಯಾರಾಗಿ ಕೃಷ್ಣನ ಮರಣಾನಂತರ ಬೇಡರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಎನ್ನುತ್ತದೆ.

ಗ್ರಂಥ ಋಣ: ಮಹಾಭಾರತದ ಪಾತ್ರ ಸಂಗತಿಗಳು, ಅ.ರಾ. ಮಿತ್ರ.

Wednesday, 25 June 2014

ಮಣಿಮಂತನಿಗೆ ಅಗಸ್ತ್ಯರ ಶಾಪ...

             ಒಮ್ಮೆ ಕುಶಾವತಿ ಎಂಬ ಪುಣ್ಯನದಿಯ ತೀರದಲ್ಲಿ ದೇವತೆಗಳು ಸತ್ರಯಾಗ ಮಾಡುತ್ತಿದ್ದಾಗ ಅಲ್ಲಿಗೆ ಕುಬೇರನು ತನ್ನ ಗೆಳೆಯ ಮಣಿಮಂತನನ್ನು ಕರೆದುಕೊಂಡು ಪುಷ್ಪಕವಿಮಾನದಲ್ಲಿ ಬರುತ್ತಿದ್ದ. ಆಗ ಕಾಳಿ ನದಿಯ ದಡದಲ್ಲಿ ಅಗಸ್ತ್ಯರು ಸೂರ್ಯನಮಸ್ಕಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮಣಿಮಂತ ಕೆಳಗೆ ಉಗುಳಿದ. ಅದು ನೇರವಾಗಿ ಅಗಸ್ತ್ಯರ ಮೇಲೆ ಬಿದ್ದಿತು. ಆಗ ಅಗಸ್ತ್ಯರಿಗೆ ಸಿಟ್ಟು ಬಂದು ಮಣಿಮಂತನಿಗೆ "ನಿನಗೆ ಮಾನವನಿಂದಲೇ ಸಾವು ಬರಲಿ" ಎಂದು ಶಾಪವಿತ್ತರು. 

             ಇದಾದ ಸ್ವಲ್ಪ ಸಮಯದ ನಂತರ ಪಾಂಡವರು ಅರಣ್ಯವಾಸದಲ್ಲಿದ್ದಾಗ ಕೆಲವು ದಿನಗಳ ಕಾಲ ಗಂಧಮಾದನ ಪ್ರದೇಶದಲ್ಲಿ ಪಾರ್ಷ್ಣಿಸೇನ ಮುನಿಯ ಆಶ್ರಮದಲ್ಲಿ ಸ್ವಲ್ಪ ಕಾಲ ತಂಗಿದ್ದರು. ಅಲ್ಲಿದ್ದಾಗ ಒಂದು ವಿಚಿತ್ರ ಘಟನೆ ನಡೆಯಿತು. ಗರುಡನು ಒಂದು ಸಪ೵ವನ್ನು ಕಚ್ಚಿಕೊಂಡು ಹಾರಿದಾಗ ರೆಕ್ಕೆಯ ರಭಸಕ್ಕೆ ಒಂದು ಮರ ಅಲುಗಾಡಿ ಅದರ ಹೂವು ಉದುರಿತು. ಅದು ಪಂಚವರ್ಣ ಸೌರಭದ ಕುಸುಮ. ಶ್ವೇತ ನದಿಯ ತೀರಪ್ರದೇಶದಲ್ಲಿ ದ್ರೌಪದಿಯ ವಸತಿಯ ಮುಂದೆ ಆ ಹೂವು ಬಿದ್ದಿತು. ಅದರ ಕಂಪಿಗೆ ಮಾರುಹೋದ ಆಕೆ ತನ್ನ ಆಸೆಯನ್ನು ಭೀಮನಲ್ಲಿ ಹೇಳಿಕೊಳ್ಳುತ್ತಾಳೆ. ಆಗ ಭೀಮನು ಆ ಹೂವನ್ನು ತರುವೆನೆಂದು ಅದನ್ನು ಹುಡುಕಿಕೊಂಡು ಹೊರಟನು. ಕೊನೆಗೆ ಅದು ಕುಬೇರನ ತೋಟದಲ್ಲಿ ಸಿಕ್ಕಿತು. ಶಂಖವನ್ನು ಊದಿಕೊಂಡು ಹೋಗುತ್ತಿದ್ದ ಭೀಮನ ಎದುರಿಗೆ ದೈತ್ಯ ಮಣಿಮಂತನು ಅಡ್ಡ ಬಂದು ಹೂವನ್ನು ಕೀಳದಂತೆ ಅಡ್ಡಿಪಡಿಸಿದ. ಅದನ್ನು ಕೇಳದ ಭೀಮನು ಅವನ ಮೇಲೆ ಹೋರಾಟಕ್ಕೆ ನಿಲ್ಲುತ್ತಾನೆ. ಇಬ್ಬರ ನಡುವೆ ಭೀಕರ ಕಾಳಗ ನಡೆದು ಭೀಮನ ಗದಾಘಾತದಿಂದ ಮಣಿಮಂತ ಸತ್ತ. ಮಣಿಮಂತನ ಸೋಲು ಮತ್ತು ಸಾವಿನ ಸುದ್ದಿ ಕೇಳಿ ಕುಬೇರನೇ ಅಲ್ಲಿಗೆ ಬಂದ. ಆದರೆ ಅವನು ಹಸನ್ಮುಖಿಯಾಗಿಯೇ ಇದ್ದದನ್ನು ಕಂಡು ಭೀಮನಿಗೆ ಆಶ್ಚರ್ಯವಾಯಿತು. ಆಗ ಕುಬೇರನು ಮಣಿಮಂತನ ಶಾಪವನ್ನು ವಿವರಿಸುತ್ತಾನೆ. ಗೆಳೆಯನಿಗೆ ಶಾಪ ವಿಮೋಚನೆಯಾದುದನ್ನು ಕಂಡು ಸಂತೋಷಿಸುತ್ತಾನೆ.

             ಮಣಿಮಂತನಿಗೆ ಶಾಪ ನೀಡುವ ಸಂದಭ೵ದಲ್ಲಿ ಅಗಸ್ತ್ಯರು ಅವನನ್ನು ವಿಮಾನದಲ್ಲಿ ಕರೆತಂದುದಕ್ಕೆ ಕುಬೇರನಿಗೆ ಕೂಡ "ನಿನ್ನ ಸೇನೆ ಒಬ್ಬ ಮಾನವನಿಂದಲೇ ನಾಶವಾಗಲಿ" ಎಂದು ಶಾಪವಿತ್ತರೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. 

            

Friday, 20 June 2014

ಮುನಿ ರೈಭ್ಯ.....

        ಉಪರಿಚರ ವಸುವಿನ ಮಹಾಯಜ್ಞದಲ್ಲಿ ಸದಸ್ಯರಾದವರಲ್ಲಿ ಈ ರೈಭ್ಯ ಮಹರ್ಷಿಯು ಒಬ್ಬರು. ಇವರು ಪ್ರಸಿದ್ದ ಋಷಿ ಅಂಗೀರಸರ ಮಗ. ಮುನಿ ಭರಧ್ವಜರ ಮಿತ್ರರಾಗಿದ್ದವರು. ಇವರಿಗೆ ಅವಾ೵ವಸು ಮತ್ತು ಪರಾವಸು ಎಂಬ ಮಕ್ಕಳಿದ್ದರು. ರೈಭ್ಯನು ಬೃಹಸ್ಪತಿಯ ಬಳಿಗೇ ಹೋಗಿ ಮೋಕ್ಷವು ಕರ್ಮದಿಂದ ಸಿದ್ಧಿಸುತ್ತದೆಯೋ ಜ್ಞಾನದಿಂದ ಸಿದ್ಧಿಸುತ್ತದೆಯೋ ಎಂಬ ಬಗೆಗೆ ಆರೋಗ್ಯಕರವಾದ ಚರ್ಚೆ ನಡೆಸಿದ್ದನ್ನು ನೋಡಿದರೆ ಆತನ ಜ್ಞಾನದ ಮಟ್ಟ ಎಷ್ಟೆಂಬುದು ತಿಳಿಯುತ್ತದೆ.
     
             ಭರಧ್ವಜ ಮುನಿಯ ಮಗನಾದ ಯವಕ್ರೀತ ಮತ್ತು ರೈಭ್ಯನ ಮಕ್ಕಳು ಒಟ್ಟಿಗೆ ರೈಭ್ಯರ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅರ್ವಾವಸು ಮತ್ತು ಪರಾವಸು ಮಹಾಜ್ಞಾನಿಗಳಾಗಿದ್ದರು. ಆದರೆ ಇವರನ್ನು ಕಂಡರೆ ಯವಕ್ರೀತನಿಗೆ ಅಗಾದ ಅಸೂಹೆ. ಅಲ್ಲದೆ ವ್ಯಾಸಂಗ ಕಾಲದಲ್ಲಿ ತನ್ನ ಸಹಪಾಠಿಯಾಗಿದ್ದ ಪರಾವಸುವಿನ ಪತ್ನಿ ಕೃಷ್ಣೆಯ ಮೇಲೆ ಕಣ್ಣು ಹಾಕಿದ. ಈತನ ಬಲತ್ಕಾರದ ಪ್ರಯತ್ನವನ್ನು ತನ್ನ ಮಾವನಾದ ರೈಭ್ಯನಲ್ಲಿ ತಿಳಿಸಿದಳು. ಆಗ ರೈಭ್ಯನು ಒಂದು ಹೋಮವನ್ನು ಮಾಡಿ ಒಬ್ಬಳು ಸುರಾಸುಂದರಾಂಗಿಯನ್ನು ಮತ್ತು ಒಬ್ಬ ಘೋರ ರಾಕ್ಷಸಿಯನ್ನು ಸೃಷ್ಟಿಸಿದ. ಯವಕ್ರೀತನ ಕೈಯಲ್ಲಿ ಕಮಂಡಲವಿರುವತನಕ ಏನೂ ಮಾಡುವಂತಿಲ್ಲವಾದುದರಿಂದ ಸುಂದರಾಂಗಿಯನ್ನು ಕಳಿಸಿದಾಗ ಅವಳು ತನ್ನ ಮೈಮಾಟದಿಂದ ಅವನ ಕಣ್ಣು ತಪ್ಪಿಸಿ ಕಮಂಡಲವನ್ನು ಅಪಹರಿಸಿದಳು. ನಂತರ ರಾಕ್ಷಸಿಯು ಬಂದು ಯವಕ್ರೀತನನ್ನು ಸಂಹರಿಸಿದಳು. ಈ ಸುದ್ದಿಯನ್ನು ತಿಳಿದ ಭರಧ್ವಜರು ತನ್ನ ಗೆಳೆಯ ರೈಭ್ಯನಿಗೆ, " ನನ್ನ ಮಗನನ್ನು ಕೊಂದಿದ್ದೀಯೇ. ಈ ಪಾಪ ಕಾರ್ಯದ ಫಲವಾಗಿ ನಿನ್ನ ಮಗನಿಂದಲೇ ನಿನಗೆ ಸಾವು ಬರಲಿ" ಎಂದು ಶಾಪ ಕೊಟ್ಟರು.

              ನಂತರ ರೈಭ್ಯ ಮಗ ಪರಾವಸು ಒಮ್ಮೆ ಬೃಹದ್ಯುಮ್ನನೆಂಬ ರಾಜನ ಯಜ್ಞಕ್ಕೆ ಆಹ್ವಾನಿತನಾಗಿ ಹೊರಟಿದ್ದ. ಆಗ ಇನ್ನು ಬೆಳಗಿನ ಜಾವ. ಕತ್ತಲೆಯಲ್ಲಿ ಎದುರಿಗೆ ಯಾವುದೋ ಪ್ರಾಣಿ ತನ್ನ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ಭಾಸವಾಗಿ ಕತ್ತಲಲ್ಲಿ ಅದನ್ನು ಕೊಂದುಹಾಕಿದ. ಆದರೆ ಆನಂತರ ನೋಡಿದಾಗ ಸತ್ತದ್ದು ಪ್ರಾಣಿಯಲ್ಲ ತನ್ನ ತಂದೆ ರೈಭ್ಯ ಮುನಿಯೇ ಎಂದು ಆತನಿಗೆ ತಿಳಿಯಿತು. ತದನಂತರ ಅರ್ವಾವಸು ಆಗಿದ್ದ ಪ್ರಾಮಾದವನ್ನು ತಪ್ಪಿಸುವ ಸಂಕಲ್ಪದಿಂದ ತುಂಬ ಶದರದ್ದೆಯಿಂದ ೊಂದು ಹೋಮ ಮಾಡಿದ. ದೇವತೆಗಳು ಪ್ರಸನ್ನರಾದರು. ಅವರು ವರವನ್ನು ಕೇಳು ಎಂದಾಗ ತನ್ನ ತಂದೆ ರೈಭ್ಯ ಬದುಕಿ ಬರುವಂತೆ ವರವನ್ನು ಕೋರಿದ. ಪ್ರಸನ್ನರಾಗಿದ್ದ ದೇವತೆಗಳು ಅನಾ೵ವಸುವಿಗೆ ಆತ ಕೇಳಿದ ವರವನ್ನು ಕೊಟ್ಟರು. ಹೀಗೆ ಅರ್ವಾವಸುವಿನಿಂದಾಗಿ ರೈಭ್ಯ ಬದುಕಿ ಬಂದ.

ಕೃಪೆ: ಅ.ರಾ. ಮಿತ್ರರ ' ಮಹಾಭಾರತದ ಪಾತ್ರ-ಸಂಗತಿಗಳು' ಸಂಪುಟ-2